ಅಡಿಕೆಗೆ ಹನಿ ನೀರಾವರಿ ಸಬ್ಸಿಡಿ ರದ್ದು ಮಾಡಬೇಡಿ

ಕೇಂದ್ರ ಸರಕಾರ ಅಡಿಕೆ ಬೆಳೆಯನ್ನು ಹನಿ ನೀರಾವರಿ ಸಬ್ಸಿಡಿ ಸೌಲಭ್ಯದಿಂದ ಹೊರಗಿಡುವ ಮೂಲಕ ಬೆಳೆಗಾರರಿಗೆ ಅನ್ಯಾಯ ಎಸಗಿದೆ. ಕೂಡಲೇ ಈ ಕುರಿತು ರಾಜ್ಯಗಳಿಗೆ ಕಳುಹಿಸಿದ ಸುತ್ತೋಲೆಯನ್ನು ಕೇಂದ್ರ ಸರಕಾರ ಹಿಂದೆ ಪಡೆಯಬೇಕು. ಕಾಫಿ, ಚಹ, ರಬ್ಬರ್ ಕೃಷಿಗೆ ಹನಿ ನೀರಾವರಿ ಸಬ್ಸಿಡಿ ಯೋಜನೆ ಒದಗಿಸಿರುವಂತೆ ಅಡಿಕೆ ಕೃಷಿಗೂ ಈ ಯೋಜನೆ ಮುಂದುವರಿಸಬೇಕು.
ದೇಶದ 13 ರಾಜ್ಯಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಈ ಪೈಕಿ ಕರ್ನಾಟಕ, ಕೇರಳ, ಅಸ್ಸಾಂ ರಾಜ್ಯಗಳು ಮುಂಚೂಣಿಯಲ್ಲಿವೆ. ಕರ್ನಾಟಕದ 24 ಜಿಲ್ಲೆಗಳಲ್ಲಿ ಅಡಿಕೆ ಕೃಷಿ ಇದ್ದು, 2,51,185 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 40,977 ಹೆಕ್ಟೇರ್, ಶಿವಮೊಗ್ಗ ಜಿಲ್ಲೆಯಲ್ಲಿ 48,187 ಹೆಕ್ಟೇರ್, ಚಿಕ್ಕಮಗಳೂರು ಜಿಲ್ಲೆಯಲ್ಲಿ 36,980 ಹೆಕ್ಟೇರ್, ದಾವಣಗೆರೆ ಜಿಲ್ಲೆಯಲ್ಲಿ 35,741 ಹೆಕ್ಟೇರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34,977 ಹೆಕ್ಟೇರ್ ಅಡಿಕೆ ಕೃಷಿ ಇದೆ. ಒಟ್ಟು ಬೆಳೆಗಾರರಲ್ಲಿ ಶೇ.85ರಷ್ಟು ಮಂದಿ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರಾಗಿದ್ದು, ಹನಿ ನೀರಾವರಿ ಯೋಜನೆ ಅವರಿಗೆ ಸೂಕ್ತವಾಗಿದೆ. ಈಗಾಗಲೇ ಅವರಲ್ಲಿ ಹಲವು ಮಂದಿ ಹನಿ ನೀರಾವರಿ ಯೋಜನೆ ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ, ಇದೀಗ ಹನಿ ನೀರಾವರಿ ಯೋಜನೆಯಿಂದ ಅಡಿಕೆ ಕೃಷಿಯನ್ನು ಹೊರಗಿಡುವ ಕೇಂದ್ರ ಸರ್ಕಾರದ ನಿರ್ಧಾರ ಬೆಳೆಗಾರರಿಗೆ ಆಘಾತ ಉಂಟು ಮಾಡಿದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಮೇಲೆ ಇದು ಪರಿಣಾಮ ಬೀರಲಿದೆ.

ಅಡಿಕೆಗೆ ಕೊಳೆ ಅಥವಾ ಹಳದಿ ರೋಗ ಬಂದಾಗ ಮತ್ತು ಬೆಲೆ ಕುಸಿದಾಗ ರಾಜ್ಯ ಸರಕಾರ ಬೆಂಬಲ ಬೆಲೆ ನೀಡಿ ನೆರವಾಗುತ್ತಿದೆ. ಆದರೆ, ಕೇಂದ್ರ ಸರಕಾರ ಅಡಿಕೆ ಕೃಷಿಕರಿಗೆ ನಿರ್ದಿಷ್ಟ ಯೋಜನೆ ಜಾರಿಗೊಳಿಸುತ್ತಿಲ್ಲ. ಅಡಿಕೆ ಆಮದು ತಡೆಯಲು ಕ್ರಮ ಜರುಗಿಸುತ್ತಿಲ್ಲ. ಜೊತೆಗೆ ರೈತರ ಮೇಲೆ ಈಗ ಮತ್ತೊಂದು ಬರೆ. ಕೇಂದ್ರದ ಈ ನಿರ್ಧಾರದ ಹಿಂದೆ ತಂಬಾಕು ಲಾಬಿ ಇರಬಹುದೇ ಎಂಬ ಅನುಮಾನವೂ ಕಾಡುತ್ತಿದೆ.
ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಕಾಫಿ, ಚಹ, ರಬ್ಬರ್ ಕೃಷಿಗೆ ಹನಿ ನೀರಾವರಿ ಸಬ್ಸಿಡಿ ಯೋಜನೆ ಒದಗಿಸಿರುವಂತೆ ಅಡಿಕೆ ಕೃಷಿಗೂ ಈ ಯೋಜನೆ ಮುಂದುವರಿಸಬೇಕು. ರಬ್ಬರ್ ಮತ್ತು ಕಾಫಿ ಮಂಡಳಿ ರೀತಿಯಲ್ಲಿ ಅಡಿಕೆಗೂ ಮಂಡಳಿ ರಚಿಸಬೇಕು. ಮಂಡಳಿ ಸ್ಥಾಪನೆಯಾದರೆ ಆವರ್ತನ ನಿಧಿ ರಚಿಸಿ ಬೆಂಬಲ ಬೆಲೆ, ಉಪ ಉತ್ಪನ್ನ ತಯಾರಿ, ಆಮದು ನಿರ್ಬಂಧ ಇತ್ಯಾದಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.