ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧ

ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಗಡಿ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಮ್ಮ ಸೈನಿಕರ ಹೋರಾಟ ದಿನಂಪ್ರತಿ ನಡೆಯುತ್ತದೆ. ಅದೆಷ್ಟೋ ಸೈನಿಕರು ಭಯೋತ್ಪಾದಕರೊಂದಿಗೆ ಕಾದಾಡಿ ಹುತಾತ್ಮರಾದರೆ, ಕೆಲವರು ಗಾಯಗೊಂಡು ಹುಟ್ಟೂರಿಗೆ ಮರಳುತ್ತಾರೆ. ಭಯೋತ್ಪಾದಕರೊಂದಿಗೆ ಹೋರಾಡಿ ನಾಲ್ಕು ಬಾರಿ ಸಾವಿನ ದವಡೆಯಿಂದ ಪಾರಾಗಿ ಐದನೇ ಹೋರಾಟದಲ್ಲಿ ಗಂಭೀರ ಸ್ಥಿತಿಗೆ ತಲುಪಿದ ಅಂತಹ ಓರ್ವ ಯೋಧ ಐದೂವರೆ ತಿಂಗಳ ಚಿಕಿತ್ಸೆಯಿದ ಈಗ ಗುಣಮುಖನಾಗಿ ಹುಟ್ಟೂರಿಗೆ ಮರಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ನಿವಾಸಿ ಸಂತೋಷ್ ಕುಲಾಲ್ ಅವರೇ ಭಯೋತ್ಪಾದಕರೊಂದಿಗೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧ. ಅವರು ಅ. 12ರಂದು ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಾಂಪೋರ್‌ನಲ್ಲಿ ಭಯೋತ್ಪಾದಕರೊಡನೆ ಹೋರಾಡಿ ಗುಂಡಿನೇಟಿನಿಂದ ಸಾವು-ಬದುಕಿನ ನಡುವಿನ ಹೋರಾಟದಲ್ಲಿ ಸಾವು ಜಯಿಸಿ ಬಂದವರಾಗಿದ್ದು, ಐದೂವರೆ ತಿಂಗಳ ಚಿಕಿತ್ಸೆ ಬಳಿಕ ಎಪ್ರಿಲ್‌ನಲ್ಲಿ ತಮ್ಮ ಹುಟ್ಟೂರಾದ ಮುಡಿಪುವಿಗೆ ಆಗಮಿಸಿದ್ದಾರೆ.
ದೇಶ ಸೇವೆಯ ತುಡಿತ:
ಬಂಟ್ವಾಳ ತಾಲೂಕಿನ ರಾಮಣ್ಣ ಸಾಲಿಯಾನ್ ಮತ್ತು ವಿಮಲಾ ಅವರ ಇಬ್ಬರು ಮಕ್ಕಳಲ್ಲಿ ಸಂತೋಷ್ ಹಿರಿಯವ. ಚಿಕ್ಕಂದಿನಲ್ಲಿ ತಂದೆ ನಿಧನರಾದ ಬಳಿಕ ತಾಯಿ ಮತ್ತು ಸಹೋದರಿಯೊಂದಿಗೆ ಮುಡಿಪುವಿನ ಕೊಡಕಲ್ಲಿನಲ್ಲಿರುವ ಅಜ್ಜಿ ಮನೆಗೆ ಬಂದಿದ್ದ ಸಂತೋಷ್, ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗೆ ಮುಡಿಪುವಿನ ಸರಕಾರಿ ಶಾಲೆಯಲ್ಲಿ ಕಲಿತರು. ಪಿಯುಸಿ ಮುಗಿಸಿ ದೇಶ ಸೇವೆ ಮಾಡುವ ಅದಮ್ಯ ಉತ್ಸಾಹದಿಂದ ಸೇನೆಯ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಆಯ್ಕೆಯಾದರು. 2003ರಿಂದ 2016ರ ವರೆಗೆ  ಜಮ್ಮು ಕಾಶ್ಮೀರ ಸೇರಿದಂತೆ ನಾಗಲ್ಯಾಂಡ್, ಬರ್ಮಾ, ಮಣಿಪುರದಲ್ಲಿ ನಕ್ಸಲ್ ಸೇರಿದಂತೆ ಉಗ್ರ ನಿಗ್ರಹ ಕಾರ್ಯಪಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆರ್ಮಿ ಸರ್ವಿಸ್ ಕೋರ್‌ನಲ್ಲಿದ್ದ ಸಂತೋಷ್ ಅವರು, ಕಮಾಂಡೋ ಕೋರ್ಸ್ ಮುಗಿಸಿ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಪಾಂಪೋರ್ ದಾಳಿಯಲ್ಲಿ ಗಂಭೀರ:
2016ರ ಸಪ್ಟೆಂಬರ್‌ನಲ್ಲಿ ಊರಿಗೆ ಬಂದಿದ್ದ ಸಂತೋಷ್‌ಗೆ ರಜೆ ಮುಗಿಯುವ ಮೊದಲೇ ಕಾರ್ಯಾಚರಣೆಗೆ ಹಾಜರಾಗುವಂತೆ ಕರೆ ಬಂದಿತ್ತು. ಭಾರತೀಯ ಪಡೆಯ ಸರ್ಜಿಕಲ್ ಸ್ಟ್ರೈಕ್‌ನ ತಂಡಕ್ಕೆ ಬ್ಯಾಕ್ ಸಪೋರ್ಟ್ ಮಾಡುವ ಕಾರ್ಯವನ್ನು ಸಂತೋಷ್ ಅವರಿದ್ದ ತಂಡಕ್ಕೆ ವಹಿಸಲಾಗಿತ್ತು. ಅದಾದ ಬಳಿಕ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಪಾಂಪೋರ್‌ನಲ್ಲಿರುವ ಸರಕಾರಿ ಕಟ್ಟಡವೊಂದರಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎನ್ನುವ ಸುಳಿವಿನ ಹಿನ್ನೆಲೆಯಲ್ಲಿ ಇವರಿದ್ದ 6 ಜನರ ಕಮಾಂಡೋ ಕಾರ್ಯ ಪಡೆಗೆ ಶೋಧ ಕಾರ್ಯ ವಹಿಸಲಾಗಿತ್ತು. ಕಟ್ಟಡ ಮತ್ತು ಕಟ್ಟಡದ ಪಕ್ಕದಲ್ಲಿದ್ದ ಗುಡ್ಡದಲ್ಲಿ ಭಯೋತ್ಪಾದಕರಿದ್ದ ಮಾಹಿತಿ ಸಿಕ್ಕಿತ್ತು. ಅಷ್ಟೊತ್ತಿಗೆ ಎರಡೂ ಕಡೆಯಿಂದ ಗುಂಡಿನ ದಾಳಿ ಪ್ರಾರಂಭವಾಗಿತ್ತು.
‘‘ನಾವು ಗುಡ್ಡದಲ್ಲಿದ್ದ ಮೂವರು ಭಯೋತ್ಪಾದಕರನ್ನು ಮತ್ತು ಕಟ್ಟಡದಲ್ಲಿ ಅಡಗಿದ್ದ ಓರ್ವ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಯಶಸ್ವಿಯಾದೆವು. ಕಟ್ಟಡದಲ್ಲಿದ್ದ ಭಯೋತ್ಪಾದಕರು ನಮ್ಮ ಮೇಲೆ ದಾಳಿ ನಡೆಸಿದಾಗ ನನ್ನ ಎದೆಗೆ ಎರಡು ಗುಂಡು ಹಾಗೂ ಕಾಲಿಗೆ ಮೂರು ಗುಂಡು ತಗುಲಿತ್ತು. ನಾವಿದ್ದ ಆರು ಜನರಲ್ಲಿ ಉತ್ತರ ಪ್ರದೇಶದ ಜ್ಞಾನೆಂದರ್ ಮತ್ತು ಒಡಿಶ್ಶಾದ ಬಿಸ್ವಾಸ್ ಸಾವನ್ನಪ್ಪಿದ್ದರು. ಎದೆಗೆ ಗುಂಡು ಬಿದ್ದ ಬಳಿಕ ಏನಾಯಿತೆಂದು ಗೊತ್ತಾಗಲಿಲ್ಲ. ಎರಡೂವರೆ ವಾರ ಕೋಮಾದಲ್ಲಿದ್ದೆ. ಎಚ್ಚರವಾದಾಗ ಆಸ್ಪತ್ರೆಯಲ್ಲಿ ಇರುವುದು ತಿಳಿಯಿತು. ಭಯೋತ್ಪಾದಕರೊಂದಿಗೆ ಸಂಘರ್ಷ 56 ಗಂಟೆಗಳ ಕಾಲ ನಡೆದಿದ್ದು,  ಸಹೋದ್ಯೋಗಿಗಳು ಅಲ್ಲಿನ ಆರು ಅಂತಸ್ತಿನ ಕಟ್ಟಡ ಸ್ಪೋಟಿಸಿ ಭಯೋತ್ಪಾದಕರನ್ನು ಕೊಂದಿದ್ದಾರೆ ಎಂಬುದು ತಿಳಿಯಿತು.

‘ಕಳೆದ 13 ವರ್ಷಗಳ ಸೇನಾ ಸೇವೆಯಲ್ಲಿ ಹಲವು  ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ನಾಲ್ಕು ಬಾರಿ ಸಾವಿನ ದವಡೆಯಿಂದ ಪಾರಾಗಿದ್ದೇನೆ. ಮಣಿಪುರದಲ್ಲಿ ಮಾವೋವಾದಿಗಳು ದಾಳಿ ನಡೆಸಿ ನಮ್ಮ ತಂಡದ ಮೂರು ವಾಹನಗಳನ್ನು ಸ್ಪೋಟಿಸಿದ್ದು, ಅದರಲ್ಲಿ 14 ಸೈನಿಕರು ಹುತಾತ್ಮರಾಗಿದ್ದರು. ನಾಲ್ಕನೆ ವಾಹನದಲ್ಲಿದ್ದ ನಾವು ಕೂದಲೆಳೆ ಅಂತರದಲ್ಲಿ ಪಾರಾಗಿದ್ದೆವು. ಎರಡನೇ ದಾಳಿ ನಾಗಲ್ಯಾಂಡ್‌ನಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿತ್ತು. ಈ ದಾಳಿಯಲ್ಲಿ ನನ್ನ ಕಾಲಿಗೆ ಗಾಯವಾಗಿತ್ತು. ಮೂರನೆ ದಾಳಿ ಪೂಂಛ್‌ನಲ್ಲಿ ನಡೆದಿದ್ದು, ತಲೆಗೆ ಗುಂಡು ತಗಲಿತ್ತು. ನಾಲ್ಕನೇಯದಾಗಿ ನಡೆದ ಪಾಂಪೋರ್ ದಾಳಿಯಲ್ಲಿ ಐದು ಗುಂಡು ತಗುಲಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ಇನ್ನೂ ಎರಡು ವರ್ಷ ಸೇವಾವಧಿ ಬಾಕಿಯಿದ್ದು, ಗುಣಮುಖರಾಗಿ ದೇಶ ಸೇವೆಗೆ ಮರಳಬೇಕೆಂದಿದ್ದೇನೆ’ ಎಂದು ಸಂತೋಷ್ ಹೇಳಿದ್ದಾರೆ.

ಮನೆಯ ಏಕೈಕ ಆಧಾರಸ್ತಂಭ:
ಸಂತೋಷ್ ಮದುವೆಯಾಗಿ ಮೂರು ವರ್ಷ ಕಳೆದಿದೆ. ಪತ್ನಿ ಖಾಸಗಿ ಶಾಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕಿ, ಬಡ ಕುಟುಂಬಕ್ಕೆ ಸಂತೋಷ್ ಅವರೇ ಆಧಾರ ಸ್ತಂಭ. ತಾಯಿ, ಸಹೋದರಿ, ಸಹೋದರಿಯ ಮಗುವನ್ನು ನೋಡುವ ಜವಾಬ್ದಾರಿ ಸಂತೋಷ್ ಅವರಿಗಿದೆ. ಆದರೆ ಗಂಭೀರವಾಗಿ ಗಾಯಗೊಂಡು ಸೇನೆಯಿಂದ ಮನೆಗೆ ವಾಪಸ್ಸಾಗಿರುವ ಸಂತೋಷ್ ಕುಟುಂಬಕ್ಕೆ ಆರ್ಥಿಕ ಚೈತನ್ಯ ನೀಡುವ ಕಾರ್ಯ ಆಗಬೇಕಾಗಿದೆ.


ಮನೆಗೆ ತಿಳಿಸಿರಲಿಲ್ಲ:

ಕಳೆದ ಸಪ್ಟೆಂಬರ್‌ನಲ್ಲಿ ಮನೆಗೆ ಬಂದಿದ್ದ ಸಂತೋಷ್ ಕೆಲವೇ ದಿನಗಳಲ್ಲಿ ಕರ್ತವ್ಯದ ಕರೆಗೆ ಓಗೊಟ್ಟು ತೆರಳಿದ್ದರು. ಅ. 12ರಂದು ನಡೆದ ದಾಳಿಯಲ್ಲಿ ತನಗೆ ಮಾರಣಾಂತಿಕ ಗಾಯವಾಗಿದೆ ಎನ್ನುವ ವಿಚಾರವನ್ನು ಪತ್ನಿ, ತಾಯಿ ಹಾಗೂ ಸಹೋದರಿಗೆ ತಿಳಿಸಿರಲಿಲ್ಲ. ಪತ್ನಿಯ ಸಹೋದರನಿಗೆ ಮಾತ್ರ ಮಾಹಿತಿ ನೀಡಿದ್ದರು. ಜಮ್ಮುವಿನ ಪಠಾನ್‌ಕೋಟ್ ಆಸ್ಪತ್ರೆಯಲ್ಲಿದ್ದ ಸಂತೋಷ್ ಬಳಿಕ ದಿಲ್ಲಿಯ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ದಿಲ್ಲಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ತಲುಪಿ, ಬೆಂಗಳೂರಿನಿಂದ ಸೇನಾ ವಾಹನದಲ್ಲಿ ಏ.3ರಂದು ಮನೆಗೆ ತಲುಪಿದಾಗಲೇ ಪತ್ನಿ, ತಾಯಿ, ಸಹೋದರರಿಗೆ ಕಾರ್ಯಾಚರಣೆಯಲ್ಲಿ ಗಾಯಗೊಂಡ ವಿಚಾರ ತಿಳಿದದ್ದು. ಕೋಮಾ ಸ್ಥಿತಿಯಿಂದ ಹೊರಬಂದ ಬಳಿಕ ಮನೆಯವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದರು. ಆದರೆ, ಗಾಯಗೊಂಡಿರುವುದರ ಬಗ್ಗೆ ತಿಳಿಸಿರಲಿಲ್ಲ.

ಕಾಳುಮೆಣಸು ಬೆಳೆ ಮಾಹಿತಿ ಕಾರ್ಯಾಗಾರ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಇಟಗಿ ರಾಮೇಶ್ವರ ದೇವಾಲಯದ ಸೀತಾರಾಮ ಹೆಗಡೆ ಸಭಾಭವನದಲ್ಲಿ ಕಾಳುಮೆಣಸು ಬೆಳೆ ಮಾಹಿತಿ ಕಾರ್ಯಾಗಾರ ನಡೆಯಿತು. ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಹೆಗಡೆ ಕೊಡ್ತಗಣಿ ಮಾತನಾಡಿ, ನಮ್ಮ ತೋಟಗಳಲ್ಲಿ ಬೆಳೆಯುವ ಕಾಳುಮೆಣಸು ಗುಣಮಟ್ಟದಲ್ಲಿ ಹೆಚ್ಚಿನದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಸೊರಗು ರೋಗದಿಂದ ಸಂಪೂರ್ಣ ನಾಶವಾಗಿದೆ. ಈಗ ವೈಜ್ಞಾನಿಕವಾಗಿ ಆಧುನಿಕ ತಂತ್ರಜ್ಞಾನದೊಂದಿಗೆ ಕಾಳುಮೆಣಸು ಬೆಳೆಯಲು ತೋಟಗಾರಿಕಾ ಇಲಾಖೆಯಿಂದ ಈ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ರೈತರಿಗೆ ಹೆಚ್ಚಿನ ಉಪಯೋಗವಾಗಬೇಕೆಂಬುದು ನಮ್ಮ ಸಂಕಲ್ಪವಾಗಿದೆ ಎಂದರು.
ಕಾಳುಮೆಣಸು ಕಿರುಹೊತ್ತಿಗೆಯನ್ನು ಪ್ರಗತಿಪರ ಕೃಷಿಕ ರವಿಲೋಚನ್ ಮಡಗಾಂವಕರ್ ಬಿಡುಗಡೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿ.ಕೆ. ಭಟ್ ಕಶಿಗೆ ಮಾತನಾಡಿ, ಪರಂಪರೆಯಿಂದಲೂ ನಾವೆಲ್ಲರೂ ಕಾಳುಮೆಣಸು ಬೆಳೆಗಾರರು. ಈ ಪ್ರದೇಶದಲ್ಲಿ 3000 ಮಿ.ಮೀ ನಿಂದ 12,000 ಮಿ.ಮೀ ಮಳೆ ಬೀಳುತ್ತದೆ. ಹೀಗಿರುವಾಗ ನೀರು ಹೆಚ್ಚಾಗಿ ಅಥವಾ ನೀರಿಲ್ಲದೆ ಕಾಳುಮೆಣಸಿಗೆ ಸೊರಗು ರೋಗ ಬರುತ್ತದೆಂದು ತಜ್ಞರು ಹೇಳುವುದು ಅವಾಸ್ತವ. ಪರಂಪರೆಯಿಂದ ಬಂದ ತಳಿಗಳು ಚೆನ್ನಾಗಿದ್ದವು. ಪಣಿಯೂರ್ ಎಂಬ ಹೊಸ ತಳಿಯನ್ನು ತೋಟಗಾರಿಕಾ ಇಲಾಖೆ ತಂದುಕೊಟ್ಟ ಮೇಲೆ ಸೊರಗುರೋಗ ಬಂದಿತು ಎಂದರು.

ಡಾ ವಿ.ಎಂ. ಹೆಗಡೆ ಕಾಳುಮೆಣಸು ಸಸಿ ಮಾಡುವುದು, ನಾಟಿ ಮಾಡುವುದು, ಕಾಲಕಾಲಕ್ಕೆ ಗೊಬ್ಬರ, ನೀರು ಹಾಕುವುದು, ಔಷಧ ಸಿಂಪರಣೆಗಳ ಕುರಿತು ಉಪನ್ಯಾಸ ನೀಡಿದರು. ಡಾ ಲಕ್ಷ್ಮೀನಾರಾಯಣ ಹೆಗಡೆ ಕಾಳುಮೆಣಸಿನ ತಳಿಗಳು, ಇಳುವರಿ ಕುರಿತು ಸಾಕ್ಷಚಿತ್ರದೊಂದಿಗೆ ವಿವರಿಸಿದರು. ರೈತರೊಂದಿಗೆ ಸಂವಾದ ನಡೆಸಿದರು. ನಾರಾಯಣಮೂರ್ತಿ ಹೆಗಡೆ ಸ್ವಾಗತಿಸಿ, ನಿರೂಪಿಸಿದರು.

ಅನಾಥ ಯುವತಿಯರಿಗೆ ಬಾಳು ನೀಡಿದ ಬ್ರಾಹ್ಮಣ ಯುವಕರು

ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಮದುವೆಯಲ್ಲಿ ಇಬ್ಬರು ಅನಾಥ ಯುವತಿಯರಿಗೆ ಬ್ರಾಹ್ಮಣ ಯುವಕರು ಬಾಳು ನೀಡಿದರು. ಅರ್ಪಿತಾ ಮಂಗಳೂರು ಪೆರ್ಮುದೆಯ ಸೀತಾರಾಂ ಶಾಸ್ತ್ರಿ ಅವರ ಪುತ್ರ ಗಿರೀಶ ಶಾಸ್ತ್ರಿ ಅವರನ್ನು ವರಿಸಿದರೆ, ಸುನೀತಾ ಕುಂದಗೋಳ ತಾಲೂಕಿನ ಯರಗುಪ್ಪಿಯ ಹನುಮಂತರಾವ್ ಅವರ ಪುತ್ರ ನರಸಿಂಹರಾವ್ ಅವರೊಂದಿಗೆ ಹಸೆಮಣೆ ಏರಿದರು.
ಗಣಪತಿ ಹೋಮ, ಬ್ರಾಹ್ಮಣ ಸಂಪ್ರದಾಯದಂತೆ ಮಂತ್ರ ಪಠಣ ಮಾಡಿಸುವ ಮೂಲಕ ಹಸೆಮಣೆ ಏರಿದ ನವದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಇದಕ್ಕೂ ಮೊದಲು ವಧುಗಳಿಗೆ ಅರಿಷಿಣ ಕಾರ್ಯಕ್ರಮ, ಬಳೆ ಇಡಿಸುವುದು ಸೇರಿದಂತೆ ವಿವಿಧ ಸಂಪ್ರದಾಯ ಬದ್ಧ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ ಶಾಸ್ತ್ರೀ, ತಾನು ಅಡುಗೆ ಗುತ್ತಿಗೆದಾರರಾಗಿದ್ದು ಹಲವು ಕಡೆ ಹೆಣ್ಣು ನೋಡಿದರೂ ಅಡುಗೆ ಗುತ್ತಿಗೆದಾರರು ಎನ್ನುವ ಕಾರಣಕ್ಕೆ ಹೆಣ್ಣು ನೀಡುತ್ತಿರಲಿಲ್ಲ. ಈ ಕುರಿತು ಅನಾಥ ಯುವತಿಗೆ ಬಾಳು ನೀಡಬೇಕೆಂಬ ಇಚ್ಚೆಯಿಂದ ಮನೆಯ ಹಿರಿಯರೊಂದಿಗೆ ಚರ್ಚಿಸಿದಾಗ ಮನೆಯವರು ಇದಕ್ಕೆ ಸಮ್ಮತಿಸಿದರು. ಅದರಂತೆ ಇಂದು ಅರ್ಪಿತಾಳನ್ನು ಕೈ ಹಿಡಿಯುವ ಮೂಲಕ ಬಾಳಸಂಗಾತಿಯನ್ನಾಗಿ ಮಾಡಿಕೊಂಡಿದ್ದು ಸಂತಸ ತಂದಿದೆ. ಅರ್ಪಿತಾ ಇನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬಯಸಿದರೆ ಯಾವುದೇ ತೊಂದರೆಯಾಗದಂತೆ ಅವಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವುದಾಗಿ ತಿಳಿಸಿದರು.

ಕುಂದಗೋಳ ತಾಲೂಕಿನ ಯರಗುಪ್ಪಿಯ ಹನುಮಂತರಾವ್ ಅವರ ಪುತ್ರ ನರಸಿಂಹರಾವ್, ಒಂದು ಅನಾಥ ಹೆಣ್ಣು ಮಗಳಿಗೆ ಎಲ್ಲರಂತೆ ಕುಟುಂಬದವರೊಂದಿಗೆ ವಾಸಿಸುವ ರಸ ಗಳಿಗೆ ಸಿಗುವಂತಾಗಲಿ ಹಾಗೂ ಎಲ್ಲರೊಂದಿಗೆ ನಲಿಯುತ ಬಾಳುವಂತಾಗಲಿ ಎಂಬ ಮಹದಾಸೆಯಿಂದ ಸುನೀತಾಳನ್ನು ಬಾಳಸಂಗಾತಿಯನ್ನಾಗಿ ಮಾಡಿಕೊಂಡಿದ್ದೇನೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದು ಎಂದರು.

ಮದುವೆ ಸಮಾರಂಭಕ್ಕೆ ಡಾ ಗಂಗೂಬಾಯಿ ಹಾನಗಲ್ಲ ಮ್ಯೂಜಿಕ್ ಫೌಂಡೇಶನ್ ವಿದ್ಯಾರ್ಥಿಗಳಿಂದ ನಡೆದ ಸಂಗೀತ, ನೃತ್ಯಗಳು ಮೆರುಗು ನೀಡಿದವು.

ಸಾಧಕರಿಗೆ ‘ಹವ್ಯಕ’ ಪ್ರಶಸ್ತಿ ಪ್ರಕಟ

ಖ್ಯಾತ ಹೃದ್ರೋಗ ತಜ್ಞ ಡಾ ದಿವಾಕರ ಭಟ್ಟ ಸೇರಿದಂತೆ ಹಲವು ಸಾಧಕರಿಗೆ ಅಖಿಲ ಹವ್ಯಕ ಮಹಾಸಭಾದ ಹವ್ಯಕ ಪ್ರಶಸ್ತಿ ಪ್ರಕಟಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಮೂಲದ ಖ್ಯಾತ ಹೃದ್ರೋಗ ತಜ್ಞ ಡಾ ದಿವಾಕರ ಭಟ್ಟ ಬೆಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ ಕೀರ್ತಿ ಪಡೆದಿದ್ದಾರೆ. ಇವರು ಹವ್ಯಕ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂಲತಃ ಶಿರಸಿ ತಾಲೂಕಿನ ಗೋಳಗೋಡಿನವರಾದ ಹಿಂದೂಸ್ತಾನಿ ಶಾಸೀಯ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ ವಿದುಷಿ ವಸುಧಾ ಶರ್ಮಾ ಸಾಗರ ಅವರಿಗೆ, ಭಾರತೀಯ ರಕ್ಷಣಾ ಕ್ಷೇತ್ರದ ತೇಜಸ್ ಯುದ್ಧ ವಿಮಾನದ ಯೋಜನಾ ಮುಖ್ಯಸ್ಥರಾಗಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುವ ಕುಮಟಾ ಮೂಲದ ಕೃಷ್ಣ ಭಟ್ ಮೂರೂರು ಅವರಿಗೆ ಹವ್ಯಕ ಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

ಸಾಗರದ ಎಂ.ಹರನಾಥ ರಾವ್ ಮತ್ತಿಕೊಪ್ಪ, ದಕ್ಷಿಣ ಕನ್ನಡದ ಗಂಗಾ ಪಾದೇಕಲ್ಲಿಗೆ ಹವ್ಯಕ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಮೇಲುಕೋಟೆ ಸಂಸ್ಕೃತ ವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಯಕ್ಷಗಾನ ಹಾಗೂ ತಾಳಮದ್ದಳೆ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಖ್ಯಾತ ವಾಗ್ಮಿ ಹಾಗೂ ಉತ್ತಮ ಲೇಖಕ, ಸಂಸ್ಕೃತ ಮತ್ತು ಕನ್ನಡದಲ್ಲಿ ಹಲವಾರು ಮೌಲಿಕ ಕೃತಿಗಳನ್ನು ರಚಿಸಿ ಪ್ರಕಟಿಸಿದ ಉಮಾಕಾಂತ ಭಟ್ಟರಿಗೆ ಹವ್ಯಕ ಮಹಾಸಭಾ ‘ಹವ್ಯಕ ಭೂಷಣ’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸಾಂಕೇತಿಕವಾಗಿ ಪಲ್ಲವ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದ್ದು, ಏ.9ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಗೋರೆಯ ಪಾದುಕಾ ಮಂದಿರಕ್ಕೆ ತಾಮ್ರಪರ್ಣ ಆಚ್ಛಾದನೆ

ಉತ್ತರ ಕನ್ನಡ ಜಿಲ್ಲೆ ಕುಮಟಾ ಸಮೀಪದ ಧಾರೇಶ್ವರನ ಸನ್ನಿಧಿಯಿಂದ ಕೇವಲ ಎರಡು ಕಿಮೀ ದೂರದಲ್ಲಿರುವ ಗೋರೆ ಗುಡ್ಡ ಕೇವಲ ಕಲ್ಲು ಗುಡ್ಡೆಯಲ್ಲ, ಶಿವ ಸಂಕಲ್ಪದ ತಪೋಭೂಮಿ ಎಂಬುದು ಜನಜನಿತ. ಇತಿಹಾಸದಲ್ಲಿ ಮಾಂಧಾತ ರಾಜರೊಬ್ಬರ ಕಾಲಕ್ಕೆ ಶ್ರೀಗೋಪಾಲಕೃಷ್ಣ ದೇವರ ಸಾನ್ನಿಧ್ಯ ಸ್ಥಾಪನೆಯಾಗಿ ಬಳಕೆಯಲ್ಲಿತ್ತು. ಇದಕ್ಕೂ ಮುನ್ನವೇ ಸ್ವತಃ ಶಿವನ ಅಪ್ಪಣೆಯಂತೆ ನಂದಿಕೇಶ್ವರನೇ ತನ್ನ ಶೃಂಗದಿಂದ ನಿರ್ಮಿಸಿದ ಎನ್ನಲಾಗುವ ತೀರ್ಥೋದಕ ಇಂದಿಗೂ ನಂದಿಶೃಂಗತೀರ್ಥವೆಂದು ಐತಿಹ್ಯ ಹೊಂದಿದೆ.
ಕಾಲಾಂತರದಲ್ಲಿ ದುಷ್ಟಶಕ್ತಿಗಳಿಂದ ಜೀರ್ಣಗೊಂಡ ಗುಡಿ, ಕಲುಷಿತಗೊಂಡ ತೀರ್ಥವನ್ನು ಸ್ವತಃ ದತ್ತಾತ್ರೇಯ ಅವತಾರವೆಂದೇ ಖ್ಯಾತರಾದ ಶ್ರೀಧರ ಸ್ವಾಮಿಗಳೇ ಪುನರುದ್ಧಾರಗೊಳಿಸಿದ್ದರು. ಗುಡಿಗೋಪುರಗಳು ನಿರ್ಮಾಣಗೊಂಡು ರಥೋತ್ಸವಗಳು ಆರಂಭವಾದವು. ದಿನದಿಂದ ದಿನಕ್ಕೆ ಚೇತೋಹಾರಿಯಾಗಿ ಬೆಳೆದ ಗೋರೆ ಕ್ಷೇತ್ರದಲ್ಲಿ ಶ್ರೀಧರರು ತಮ್ಮ ಶಿಷ್ಯರಾದ ಈಶ್ವರ ಸಾಧುಗಳನ್ನು ಕಳುಹಿದರು. ಶ್ರೀಧರರು ಮಹಾಸಮಾಧಿಸ್ತರಾದ ನಂತರ ಈಶ್ವರ ಸಾಧುಗಳು ಗೋರೆಯಲ್ಲಿಯೇ ತುರ್ಯಾಶ್ರಮ ಸ್ವೀಕರಿಸಿ ಗೋಪಾಲ ಸದಾನಂದ ಸ್ವಾಮಿಗಳೆಂಬ ಯೋಗ ಪಟ್ಟ ಪಡೆದರು.
ಗೋಪಾಲಕೃಷ್ಣ  ಗುಡಿಯ ಸನಿಹದಲ್ಲೇ ಶ್ರೀಧರ ಪಾದುಕಾ ಮಂದಿರ ನಿರ್ಮಾಣವಾಯಿತು. ಉತ್ತರ ದಿಕ್ಕಿನಲ್ಲಿ ದಕ್ಷತುಂಡ ಗಣಪತಿ ಮೂರ್ತಿಯ ಉದ್ಭವವಾಯಿತು. ಗಣಪತಿಗೆ ಗುಡಿಯ ನಿರ್ಮಾಣವಾಯಿತು. 1984 ರಲ್ಲಿ ಶ್ರೀ ಸದಾನಂದ ಸ್ವಾಮಿಗಳು ಐಕ್ಯರಾದ ನಂತರ ಪಾದುಕಾ ಮಂದಿರದಲ್ಲಿಯೇ ಸಮಾಧಿ ಮಾಡಲಾಯಿತು.
ಗುರು ಪ್ರೇರಣೆಯಂತೆ ಪರಿವ್ರಾಜಕರಾಗಿದ್ದ ಶ್ರೀ ನಿತ್ಯಾನಂದ ಸ್ವಾಮಿಗಳನ್ನು ಭಕ್ತಾದಿಗಳು ಗೋರೆಕ್ಷೇತ್ರಕ್ಕೆ ಸ್ವಾಗತಿಸಿ ನೆಲೆಯಾಗಿಸಿದರು. ಕೃಷ್ಣ ಸೇವೆ, ಪಾದುಕಾಸೇವೆ, ಭಕ್ತರ ಇಷ್ಟಾರ್ಥ ಸಿದ್ಧಿಯೂ ಮುಂದುವರೆಯಿತು. ಗೋಶಾಲೆ, ಯಾಗಶಾಲೆ ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣಗೊಂಡವು. 2005ರಲ್ಲಿ ಸಹಸ್ರ ಚಂಡಿಕಾ ಮಹಾಯಾಗವೂ ನಡೆಯಿತು. ನಂತರ ಬ್ರಹ್ಮೈಕ್ಯರಾದ ನಿತ್ಯಾನಂದ ಸ್ವಾಮಿಗಳನ್ನೂ ಪಾದುಕಾ ಮಂದಿರದಲ್ಲೇ ಸಮಾಧಿಸ್ತಗೊಳಿಸಲಾಯಿತು.

ಹೀಗೆ, ಸಹಸ್ರಾರು ವರ್ಷಗಳ ಭವ್ಯ ಐತಿಹ್ಯದೊಂದಿಗೆ, ಸಿದ್ಧಿಸಾಧನೆಯ ತಾಣವಾಗಿ ಗುರುತಿಸಿಕೊಂಡ ಗೋರೆ ಕ್ಷೇತ್ರದಲ್ಲಿ ಗುರು ಪ್ರೇರಣೆ ಹಾಗೂ ಭಕ್ತರ ಇಷ್ಟದಂತೆ ಶ್ರೀ ಶ್ರೀಧರ ಪಾದುಕಾ ಮಂದಿರಕ್ಕೆ ತಾಮ್ರಪರ್ಣ ಆಚ್ಛಾದನೆ ಹಾಗೂ ಶಿಖರ ಕಲಶ ಪ್ರತಿಷ್ಠೆ, ಕಲಾವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಏಪ್ರೀಲ್ 8 ರಂದು ವೈದಿಕ ಕೈಂಕರ್ಯಗಳು ಆರಂಭಗೊಳ್ಳಲಿದ್ದು ಗಣಹವನ, ವಾಸ್ತುಹವನ ಮುಂತಾದವು ನಡೆಯಲಿವೆ. ಮರುದಿನ ಏಪ್ರೀಲ್ 9ರಂದು ಶುಭ ಮುಹೂರ್ತದಲ್ಲಿ ಶಿಖರ ಕಲಶ ಪ್ರತಿಷ್ಠೆ, ಕಲಾವೃದ್ಧಿ ಹೋಮ ಸೇರಿದಂತೆ ಹಲವು ಪ್ರಮುಖ ಹವನಗಳು ನಡೆಯಲಿವೆ. ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಮಹಾ ಸಂತರ್ಪಣೆ, ಮಂತ್ರಾಕ್ಷತೆ ನಡೆಯಲಿದೆ. ಏಪ್ರೀಲ್ 12 ಮತ್ತು 13ರಂದು ಭಗವಾನ ಶ್ರೀಧರ ಸ್ವಾಮಿಗಳ 44ನೇ ಆರಾಧನಾ ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯಲಿವೆ. ಹಾಗೆಯೇ ಏಪ್ರೀಲ್ 21 ಮತ್ತು 22 ರಂದು ಶ್ರೀ ಸದಾನಂದ ಸ್ವಾಮಿಗಳ 32ನೇ ಆರಾಧನಾ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ.