ಗೋರೆಯ ಪಾದುಕಾ ಮಂದಿರಕ್ಕೆ ತಾಮ್ರಪರ್ಣ ಆಚ್ಛಾದನೆ

ಉತ್ತರ ಕನ್ನಡ ಜಿಲ್ಲೆ ಕುಮಟಾ ಸಮೀಪದ ಧಾರೇಶ್ವರನ ಸನ್ನಿಧಿಯಿಂದ ಕೇವಲ ಎರಡು ಕಿಮೀ ದೂರದಲ್ಲಿರುವ ಗೋರೆ ಗುಡ್ಡ ಕೇವಲ ಕಲ್ಲು ಗುಡ್ಡೆಯಲ್ಲ, ಶಿವ ಸಂಕಲ್ಪದ ತಪೋಭೂಮಿ ಎಂಬುದು ಜನಜನಿತ. ಇತಿಹಾಸದಲ್ಲಿ ಮಾಂಧಾತ ರಾಜರೊಬ್ಬರ ಕಾಲಕ್ಕೆ ಶ್ರೀಗೋಪಾಲಕೃಷ್ಣ ದೇವರ ಸಾನ್ನಿಧ್ಯ ಸ್ಥಾಪನೆಯಾಗಿ ಬಳಕೆಯಲ್ಲಿತ್ತು. ಇದಕ್ಕೂ ಮುನ್ನವೇ ಸ್ವತಃ ಶಿವನ ಅಪ್ಪಣೆಯಂತೆ ನಂದಿಕೇಶ್ವರನೇ ತನ್ನ ಶೃಂಗದಿಂದ ನಿರ್ಮಿಸಿದ ಎನ್ನಲಾಗುವ ತೀರ್ಥೋದಕ ಇಂದಿಗೂ ನಂದಿಶೃಂಗತೀರ್ಥವೆಂದು ಐತಿಹ್ಯ ಹೊಂದಿದೆ.
ಕಾಲಾಂತರದಲ್ಲಿ ದುಷ್ಟಶಕ್ತಿಗಳಿಂದ ಜೀರ್ಣಗೊಂಡ ಗುಡಿ, ಕಲುಷಿತಗೊಂಡ ತೀರ್ಥವನ್ನು ಸ್ವತಃ ದತ್ತಾತ್ರೇಯ ಅವತಾರವೆಂದೇ ಖ್ಯಾತರಾದ ಶ್ರೀಧರ ಸ್ವಾಮಿಗಳೇ ಪುನರುದ್ಧಾರಗೊಳಿಸಿದ್ದರು. ಗುಡಿಗೋಪುರಗಳು ನಿರ್ಮಾಣಗೊಂಡು ರಥೋತ್ಸವಗಳು ಆರಂಭವಾದವು. ದಿನದಿಂದ ದಿನಕ್ಕೆ ಚೇತೋಹಾರಿಯಾಗಿ ಬೆಳೆದ ಗೋರೆ ಕ್ಷೇತ್ರದಲ್ಲಿ ಶ್ರೀಧರರು ತಮ್ಮ ಶಿಷ್ಯರಾದ ಈಶ್ವರ ಸಾಧುಗಳನ್ನು ಕಳುಹಿದರು. ಶ್ರೀಧರರು ಮಹಾಸಮಾಧಿಸ್ತರಾದ ನಂತರ ಈಶ್ವರ ಸಾಧುಗಳು ಗೋರೆಯಲ್ಲಿಯೇ ತುರ್ಯಾಶ್ರಮ ಸ್ವೀಕರಿಸಿ ಗೋಪಾಲ ಸದಾನಂದ ಸ್ವಾಮಿಗಳೆಂಬ ಯೋಗ ಪಟ್ಟ ಪಡೆದರು.
ಗೋಪಾಲಕೃಷ್ಣ  ಗುಡಿಯ ಸನಿಹದಲ್ಲೇ ಶ್ರೀಧರ ಪಾದುಕಾ ಮಂದಿರ ನಿರ್ಮಾಣವಾಯಿತು. ಉತ್ತರ ದಿಕ್ಕಿನಲ್ಲಿ ದಕ್ಷತುಂಡ ಗಣಪತಿ ಮೂರ್ತಿಯ ಉದ್ಭವವಾಯಿತು. ಗಣಪತಿಗೆ ಗುಡಿಯ ನಿರ್ಮಾಣವಾಯಿತು. 1984 ರಲ್ಲಿ ಶ್ರೀ ಸದಾನಂದ ಸ್ವಾಮಿಗಳು ಐಕ್ಯರಾದ ನಂತರ ಪಾದುಕಾ ಮಂದಿರದಲ್ಲಿಯೇ ಸಮಾಧಿ ಮಾಡಲಾಯಿತು.
ಗುರು ಪ್ರೇರಣೆಯಂತೆ ಪರಿವ್ರಾಜಕರಾಗಿದ್ದ ಶ್ರೀ ನಿತ್ಯಾನಂದ ಸ್ವಾಮಿಗಳನ್ನು ಭಕ್ತಾದಿಗಳು ಗೋರೆಕ್ಷೇತ್ರಕ್ಕೆ ಸ್ವಾಗತಿಸಿ ನೆಲೆಯಾಗಿಸಿದರು. ಕೃಷ್ಣ ಸೇವೆ, ಪಾದುಕಾಸೇವೆ, ಭಕ್ತರ ಇಷ್ಟಾರ್ಥ ಸಿದ್ಧಿಯೂ ಮುಂದುವರೆಯಿತು. ಗೋಶಾಲೆ, ಯಾಗಶಾಲೆ ಸೇರಿದಂತೆ ಹಲವು ಕಟ್ಟಡಗಳು ನಿರ್ಮಾಣಗೊಂಡವು. 2005ರಲ್ಲಿ ಸಹಸ್ರ ಚಂಡಿಕಾ ಮಹಾಯಾಗವೂ ನಡೆಯಿತು. ನಂತರ ಬ್ರಹ್ಮೈಕ್ಯರಾದ ನಿತ್ಯಾನಂದ ಸ್ವಾಮಿಗಳನ್ನೂ ಪಾದುಕಾ ಮಂದಿರದಲ್ಲೇ ಸಮಾಧಿಸ್ತಗೊಳಿಸಲಾಯಿತು.

ಹೀಗೆ, ಸಹಸ್ರಾರು ವರ್ಷಗಳ ಭವ್ಯ ಐತಿಹ್ಯದೊಂದಿಗೆ, ಸಿದ್ಧಿಸಾಧನೆಯ ತಾಣವಾಗಿ ಗುರುತಿಸಿಕೊಂಡ ಗೋರೆ ಕ್ಷೇತ್ರದಲ್ಲಿ ಗುರು ಪ್ರೇರಣೆ ಹಾಗೂ ಭಕ್ತರ ಇಷ್ಟದಂತೆ ಶ್ರೀ ಶ್ರೀಧರ ಪಾದುಕಾ ಮಂದಿರಕ್ಕೆ ತಾಮ್ರಪರ್ಣ ಆಚ್ಛಾದನೆ ಹಾಗೂ ಶಿಖರ ಕಲಶ ಪ್ರತಿಷ್ಠೆ, ಕಲಾವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಏಪ್ರೀಲ್ 8 ರಂದು ವೈದಿಕ ಕೈಂಕರ್ಯಗಳು ಆರಂಭಗೊಳ್ಳಲಿದ್ದು ಗಣಹವನ, ವಾಸ್ತುಹವನ ಮುಂತಾದವು ನಡೆಯಲಿವೆ. ಮರುದಿನ ಏಪ್ರೀಲ್ 9ರಂದು ಶುಭ ಮುಹೂರ್ತದಲ್ಲಿ ಶಿಖರ ಕಲಶ ಪ್ರತಿಷ್ಠೆ, ಕಲಾವೃದ್ಧಿ ಹೋಮ ಸೇರಿದಂತೆ ಹಲವು ಪ್ರಮುಖ ಹವನಗಳು ನಡೆಯಲಿವೆ. ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಮಹಾ ಸಂತರ್ಪಣೆ, ಮಂತ್ರಾಕ್ಷತೆ ನಡೆಯಲಿದೆ. ಏಪ್ರೀಲ್ 12 ಮತ್ತು 13ರಂದು ಭಗವಾನ ಶ್ರೀಧರ ಸ್ವಾಮಿಗಳ 44ನೇ ಆರಾಧನಾ ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯಲಿವೆ. ಹಾಗೆಯೇ ಏಪ್ರೀಲ್ 21 ಮತ್ತು 22 ರಂದು ಶ್ರೀ ಸದಾನಂದ ಸ್ವಾಮಿಗಳ 32ನೇ ಆರಾಧನಾ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ.