ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧ

ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಗಡಿ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಮ್ಮ ಸೈನಿಕರ ಹೋರಾಟ ದಿನಂಪ್ರತಿ ನಡೆಯುತ್ತದೆ. ಅದೆಷ್ಟೋ ಸೈನಿಕರು ಭಯೋತ್ಪಾದಕರೊಂದಿಗೆ ಕಾದಾಡಿ ಹುತಾತ್ಮರಾದರೆ, ಕೆಲವರು ಗಾಯಗೊಂಡು ಹುಟ್ಟೂರಿಗೆ ಮರಳುತ್ತಾರೆ. ಭಯೋತ್ಪಾದಕರೊಂದಿಗೆ ಹೋರಾಡಿ ನಾಲ್ಕು ಬಾರಿ ಸಾವಿನ ದವಡೆಯಿಂದ ಪಾರಾಗಿ ಐದನೇ ಹೋರಾಟದಲ್ಲಿ ಗಂಭೀರ ಸ್ಥಿತಿಗೆ ತಲುಪಿದ ಅಂತಹ ಓರ್ವ ಯೋಧ ಐದೂವರೆ ತಿಂಗಳ ಚಿಕಿತ್ಸೆಯಿದ ಈಗ ಗುಣಮುಖನಾಗಿ ಹುಟ್ಟೂರಿಗೆ ಮರಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ನಿವಾಸಿ ಸಂತೋಷ್ ಕುಲಾಲ್ ಅವರೇ ಭಯೋತ್ಪಾದಕರೊಂದಿಗೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧ. ಅವರು ಅ. 12ರಂದು ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಾಂಪೋರ್‌ನಲ್ಲಿ ಭಯೋತ್ಪಾದಕರೊಡನೆ ಹೋರಾಡಿ ಗುಂಡಿನೇಟಿನಿಂದ ಸಾವು-ಬದುಕಿನ ನಡುವಿನ ಹೋರಾಟದಲ್ಲಿ ಸಾವು ಜಯಿಸಿ ಬಂದವರಾಗಿದ್ದು, ಐದೂವರೆ ತಿಂಗಳ ಚಿಕಿತ್ಸೆ ಬಳಿಕ ಎಪ್ರಿಲ್‌ನಲ್ಲಿ ತಮ್ಮ ಹುಟ್ಟೂರಾದ ಮುಡಿಪುವಿಗೆ ಆಗಮಿಸಿದ್ದಾರೆ.
ದೇಶ ಸೇವೆಯ ತುಡಿತ:
ಬಂಟ್ವಾಳ ತಾಲೂಕಿನ ರಾಮಣ್ಣ ಸಾಲಿಯಾನ್ ಮತ್ತು ವಿಮಲಾ ಅವರ ಇಬ್ಬರು ಮಕ್ಕಳಲ್ಲಿ ಸಂತೋಷ್ ಹಿರಿಯವ. ಚಿಕ್ಕಂದಿನಲ್ಲಿ ತಂದೆ ನಿಧನರಾದ ಬಳಿಕ ತಾಯಿ ಮತ್ತು ಸಹೋದರಿಯೊಂದಿಗೆ ಮುಡಿಪುವಿನ ಕೊಡಕಲ್ಲಿನಲ್ಲಿರುವ ಅಜ್ಜಿ ಮನೆಗೆ ಬಂದಿದ್ದ ಸಂತೋಷ್, ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗೆ ಮುಡಿಪುವಿನ ಸರಕಾರಿ ಶಾಲೆಯಲ್ಲಿ ಕಲಿತರು. ಪಿಯುಸಿ ಮುಗಿಸಿ ದೇಶ ಸೇವೆ ಮಾಡುವ ಅದಮ್ಯ ಉತ್ಸಾಹದಿಂದ ಸೇನೆಯ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಆಯ್ಕೆಯಾದರು. 2003ರಿಂದ 2016ರ ವರೆಗೆ  ಜಮ್ಮು ಕಾಶ್ಮೀರ ಸೇರಿದಂತೆ ನಾಗಲ್ಯಾಂಡ್, ಬರ್ಮಾ, ಮಣಿಪುರದಲ್ಲಿ ನಕ್ಸಲ್ ಸೇರಿದಂತೆ ಉಗ್ರ ನಿಗ್ರಹ ಕಾರ್ಯಪಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆರ್ಮಿ ಸರ್ವಿಸ್ ಕೋರ್‌ನಲ್ಲಿದ್ದ ಸಂತೋಷ್ ಅವರು, ಕಮಾಂಡೋ ಕೋರ್ಸ್ ಮುಗಿಸಿ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಪಾಂಪೋರ್ ದಾಳಿಯಲ್ಲಿ ಗಂಭೀರ:
2016ರ ಸಪ್ಟೆಂಬರ್‌ನಲ್ಲಿ ಊರಿಗೆ ಬಂದಿದ್ದ ಸಂತೋಷ್‌ಗೆ ರಜೆ ಮುಗಿಯುವ ಮೊದಲೇ ಕಾರ್ಯಾಚರಣೆಗೆ ಹಾಜರಾಗುವಂತೆ ಕರೆ ಬಂದಿತ್ತು. ಭಾರತೀಯ ಪಡೆಯ ಸರ್ಜಿಕಲ್ ಸ್ಟ್ರೈಕ್‌ನ ತಂಡಕ್ಕೆ ಬ್ಯಾಕ್ ಸಪೋರ್ಟ್ ಮಾಡುವ ಕಾರ್ಯವನ್ನು ಸಂತೋಷ್ ಅವರಿದ್ದ ತಂಡಕ್ಕೆ ವಹಿಸಲಾಗಿತ್ತು. ಅದಾದ ಬಳಿಕ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಪಾಂಪೋರ್‌ನಲ್ಲಿರುವ ಸರಕಾರಿ ಕಟ್ಟಡವೊಂದರಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎನ್ನುವ ಸುಳಿವಿನ ಹಿನ್ನೆಲೆಯಲ್ಲಿ ಇವರಿದ್ದ 6 ಜನರ ಕಮಾಂಡೋ ಕಾರ್ಯ ಪಡೆಗೆ ಶೋಧ ಕಾರ್ಯ ವಹಿಸಲಾಗಿತ್ತು. ಕಟ್ಟಡ ಮತ್ತು ಕಟ್ಟಡದ ಪಕ್ಕದಲ್ಲಿದ್ದ ಗುಡ್ಡದಲ್ಲಿ ಭಯೋತ್ಪಾದಕರಿದ್ದ ಮಾಹಿತಿ ಸಿಕ್ಕಿತ್ತು. ಅಷ್ಟೊತ್ತಿಗೆ ಎರಡೂ ಕಡೆಯಿಂದ ಗುಂಡಿನ ದಾಳಿ ಪ್ರಾರಂಭವಾಗಿತ್ತು.
‘‘ನಾವು ಗುಡ್ಡದಲ್ಲಿದ್ದ ಮೂವರು ಭಯೋತ್ಪಾದಕರನ್ನು ಮತ್ತು ಕಟ್ಟಡದಲ್ಲಿ ಅಡಗಿದ್ದ ಓರ್ವ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಯಶಸ್ವಿಯಾದೆವು. ಕಟ್ಟಡದಲ್ಲಿದ್ದ ಭಯೋತ್ಪಾದಕರು ನಮ್ಮ ಮೇಲೆ ದಾಳಿ ನಡೆಸಿದಾಗ ನನ್ನ ಎದೆಗೆ ಎರಡು ಗುಂಡು ಹಾಗೂ ಕಾಲಿಗೆ ಮೂರು ಗುಂಡು ತಗುಲಿತ್ತು. ನಾವಿದ್ದ ಆರು ಜನರಲ್ಲಿ ಉತ್ತರ ಪ್ರದೇಶದ ಜ್ಞಾನೆಂದರ್ ಮತ್ತು ಒಡಿಶ್ಶಾದ ಬಿಸ್ವಾಸ್ ಸಾವನ್ನಪ್ಪಿದ್ದರು. ಎದೆಗೆ ಗುಂಡು ಬಿದ್ದ ಬಳಿಕ ಏನಾಯಿತೆಂದು ಗೊತ್ತಾಗಲಿಲ್ಲ. ಎರಡೂವರೆ ವಾರ ಕೋಮಾದಲ್ಲಿದ್ದೆ. ಎಚ್ಚರವಾದಾಗ ಆಸ್ಪತ್ರೆಯಲ್ಲಿ ಇರುವುದು ತಿಳಿಯಿತು. ಭಯೋತ್ಪಾದಕರೊಂದಿಗೆ ಸಂಘರ್ಷ 56 ಗಂಟೆಗಳ ಕಾಲ ನಡೆದಿದ್ದು,  ಸಹೋದ್ಯೋಗಿಗಳು ಅಲ್ಲಿನ ಆರು ಅಂತಸ್ತಿನ ಕಟ್ಟಡ ಸ್ಪೋಟಿಸಿ ಭಯೋತ್ಪಾದಕರನ್ನು ಕೊಂದಿದ್ದಾರೆ ಎಂಬುದು ತಿಳಿಯಿತು.

‘ಕಳೆದ 13 ವರ್ಷಗಳ ಸೇನಾ ಸೇವೆಯಲ್ಲಿ ಹಲವು  ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ನಾಲ್ಕು ಬಾರಿ ಸಾವಿನ ದವಡೆಯಿಂದ ಪಾರಾಗಿದ್ದೇನೆ. ಮಣಿಪುರದಲ್ಲಿ ಮಾವೋವಾದಿಗಳು ದಾಳಿ ನಡೆಸಿ ನಮ್ಮ ತಂಡದ ಮೂರು ವಾಹನಗಳನ್ನು ಸ್ಪೋಟಿಸಿದ್ದು, ಅದರಲ್ಲಿ 14 ಸೈನಿಕರು ಹುತಾತ್ಮರಾಗಿದ್ದರು. ನಾಲ್ಕನೆ ವಾಹನದಲ್ಲಿದ್ದ ನಾವು ಕೂದಲೆಳೆ ಅಂತರದಲ್ಲಿ ಪಾರಾಗಿದ್ದೆವು. ಎರಡನೇ ದಾಳಿ ನಾಗಲ್ಯಾಂಡ್‌ನಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿತ್ತು. ಈ ದಾಳಿಯಲ್ಲಿ ನನ್ನ ಕಾಲಿಗೆ ಗಾಯವಾಗಿತ್ತು. ಮೂರನೆ ದಾಳಿ ಪೂಂಛ್‌ನಲ್ಲಿ ನಡೆದಿದ್ದು, ತಲೆಗೆ ಗುಂಡು ತಗಲಿತ್ತು. ನಾಲ್ಕನೇಯದಾಗಿ ನಡೆದ ಪಾಂಪೋರ್ ದಾಳಿಯಲ್ಲಿ ಐದು ಗುಂಡು ತಗುಲಿ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ಇನ್ನೂ ಎರಡು ವರ್ಷ ಸೇವಾವಧಿ ಬಾಕಿಯಿದ್ದು, ಗುಣಮುಖರಾಗಿ ದೇಶ ಸೇವೆಗೆ ಮರಳಬೇಕೆಂದಿದ್ದೇನೆ’ ಎಂದು ಸಂತೋಷ್ ಹೇಳಿದ್ದಾರೆ.

ಮನೆಯ ಏಕೈಕ ಆಧಾರಸ್ತಂಭ:
ಸಂತೋಷ್ ಮದುವೆಯಾಗಿ ಮೂರು ವರ್ಷ ಕಳೆದಿದೆ. ಪತ್ನಿ ಖಾಸಗಿ ಶಾಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕಿ, ಬಡ ಕುಟುಂಬಕ್ಕೆ ಸಂತೋಷ್ ಅವರೇ ಆಧಾರ ಸ್ತಂಭ. ತಾಯಿ, ಸಹೋದರಿ, ಸಹೋದರಿಯ ಮಗುವನ್ನು ನೋಡುವ ಜವಾಬ್ದಾರಿ ಸಂತೋಷ್ ಅವರಿಗಿದೆ. ಆದರೆ ಗಂಭೀರವಾಗಿ ಗಾಯಗೊಂಡು ಸೇನೆಯಿಂದ ಮನೆಗೆ ವಾಪಸ್ಸಾಗಿರುವ ಸಂತೋಷ್ ಕುಟುಂಬಕ್ಕೆ ಆರ್ಥಿಕ ಚೈತನ್ಯ ನೀಡುವ ಕಾರ್ಯ ಆಗಬೇಕಾಗಿದೆ.


ಮನೆಗೆ ತಿಳಿಸಿರಲಿಲ್ಲ:

ಕಳೆದ ಸಪ್ಟೆಂಬರ್‌ನಲ್ಲಿ ಮನೆಗೆ ಬಂದಿದ್ದ ಸಂತೋಷ್ ಕೆಲವೇ ದಿನಗಳಲ್ಲಿ ಕರ್ತವ್ಯದ ಕರೆಗೆ ಓಗೊಟ್ಟು ತೆರಳಿದ್ದರು. ಅ. 12ರಂದು ನಡೆದ ದಾಳಿಯಲ್ಲಿ ತನಗೆ ಮಾರಣಾಂತಿಕ ಗಾಯವಾಗಿದೆ ಎನ್ನುವ ವಿಚಾರವನ್ನು ಪತ್ನಿ, ತಾಯಿ ಹಾಗೂ ಸಹೋದರಿಗೆ ತಿಳಿಸಿರಲಿಲ್ಲ. ಪತ್ನಿಯ ಸಹೋದರನಿಗೆ ಮಾತ್ರ ಮಾಹಿತಿ ನೀಡಿದ್ದರು. ಜಮ್ಮುವಿನ ಪಠಾನ್‌ಕೋಟ್ ಆಸ್ಪತ್ರೆಯಲ್ಲಿದ್ದ ಸಂತೋಷ್ ಬಳಿಕ ದಿಲ್ಲಿಯ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ದಿಲ್ಲಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ತಲುಪಿ, ಬೆಂಗಳೂರಿನಿಂದ ಸೇನಾ ವಾಹನದಲ್ಲಿ ಏ.3ರಂದು ಮನೆಗೆ ತಲುಪಿದಾಗಲೇ ಪತ್ನಿ, ತಾಯಿ, ಸಹೋದರರಿಗೆ ಕಾರ್ಯಾಚರಣೆಯಲ್ಲಿ ಗಾಯಗೊಂಡ ವಿಚಾರ ತಿಳಿದದ್ದು. ಕೋಮಾ ಸ್ಥಿತಿಯಿಂದ ಹೊರಬಂದ ಬಳಿಕ ಮನೆಯವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದರು. ಆದರೆ, ಗಾಯಗೊಂಡಿರುವುದರ ಬಗ್ಗೆ ತಿಳಿಸಿರಲಿಲ್ಲ.