ಒಂಟಿಯಾಗಿ, ಒಂಟಿ ಬಾವಿ ತೋಡಿದ ಮಹಿಳೆ

ಉತ್ತರ ಕನ್ನಡದ ಶಿರಸಿ ಹೆದ್ದಾರಿಗೆ ಅಂಟಿಕೊಂಡಿರುವ ಗಣೇಶ ನಗರದ ಬಡ ಮಹಿಳೆ, ಗೌರಿ ಚಂದ್ರಶೇಖರ ನಾಯ್ಕ (51), ಏಕಾಂಗಿಯಾಗಿ ಬಾವಿ ತೋಡಿದ್ದಾಳೆ. ಮನೆಯ ಹಿಂಭಾಗದಲ್ಲಿ 150 ಅಡಿಕೆ ಹಾಗೂ 15 ತೆಂಗಿನ ಸಸಿಗಳನ್ನು ಬೆಳೆಸಿಕೊಂಡಿದ್ದಾಳೆ. ಇವು ನೀರಿನ ಕೊರತೆಯಿಂದ ಬಾಡಲು ಆರಂಭಿಸಿದವು. ಪೇಟೆಗೆ ಹೋಗಿ ಹಾರೆ, ಗುದ್ದಲಿ, ಚಾಣ, ಹಗ್ಗ ತಂದಳು. ಇರುವ ಬಕೆಟ್ ಬಳಸಿ ಬಾವಿ ತೋಡಲು ಆರಂಭಿಸಿದಳು. 40 ಅಡಿ ಆಳದ ತನಕವೂ ಒಬ್ಬಂಟಿಯಾಗಿ ತೆಗೆದ ಗೌರಿ, ಕೊನೆಯ 20 ಅಡಿ ಆಳಕ್ಕೆ ಮಾತ್ರ ನೀರು ಜಗ್ಗಲು, ಮಣ್ಣು ಎಳೆಯಲು ಮೂವರು ಹೆಣ್ಣಾಳುಗಳ ನೆರವು ಪಡೆದಿದ್ದಾಳೆ.
ಮುಂಜಾನೆ 8 ರಿಂದ ಸಂಜೆ ಕತ್ತಲಾಗುವ ತನಕ ಬಾವಿಯದ್ದೇ ಧ್ಯಾನ. ಮೊದಲು ಸರಸರನೇ ಸಾಗಿತು ಕೆಲಸ. ವಾರಗಳು ಉರುಳಿದ ಬಳಿಕ ಮಣ್ಣು ಅಗೆದು ಬಕೆಟ್‌ನಲ್ಲಿ ತುಂಬಿಟ್ಟು ಬಾವಿಯಿಂದ ಮೇಲೆ ಬಂದು ಮಣ್ಣು ಎಳೆದು ಹಾಕಿ ಕೆಳಗೆ ಇಳಿಯುತ್ತಿದ್ದಳು. ಹೀಗೆ 40 ಅಡಿ ಆಳ ಆಗುವ ತನಕವೂ ಮಾಡಿದ್ದಾಳೆ. ಬಾವಿ ತೋಡುವಾಗ ಬಿಣಚು ಕಲ್ಲುಗಳೂ ಬಂದಿದ್ದವು. ಪ್ರತಿ ದಿನ 150ಕ್ಕೂ ಹೆಚ್ಚು ಸಲ ಬಾವಿಗಿಳಿದು ಮೇಲಕ್ಕೆ ಏರಿದ್ದಳು. ಕೈ, ಕಾಲು ನೋವು ಬಂದರೂ ಛಲ ಬಿಡಲಿಲ್ಲ.ಮಲೆನಾಡ ಕುವರನಿಗೆ ಉತ್ತರ ಪ್ರದೇಶ ಕನ್ಯೆ

ಯಲ್ಲಾಪುರ ತಾಲೂಕಿನ ಕವಡೀಕೆರೆ ದೇವಸ್ಥಾನದಲ್ಲಿ ಉತ್ತರ ಪ್ರದೇಶದ ಕನ್ಯೆ ಪ್ರಜ್ಞಾ ಮಿಶ್ರಾ ಹಾಗೂ ಶಿಂಗನಮನೆಯ ಶ್ರೀನಿವಾಸ ಗಾಂವ್ಕರ್ ವಿವಾಹ ನೆರವೇರಿತು.
ಉತ್ತರ ಭಾರತದ ಮಿರ್ಜಾಪುರದ ಸಪ್ತಪದಿ ಸಂಚಾಲಕ ತ್ರಿಲೋಕನಾಥ್ ತ್ರಿವೇದಿ ಮಾತನಾಡಿ, ಉತ್ತರ ಪ್ರದೇಶದ ನಾವು, ದಕ್ಷಿಣ ಭಾರತದ ಪ್ರಕೃತಿ ಸೌಂದರ್ಯ ಹಾಗೂ ಜನರ ಪ್ರೀತಿ-ವಿಶ್ವಾಸಗಳನ್ನು ಗಳಿಸುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ-ವಿಶ್ವಾಸಕ್ಕೆ ಸದಾ ಋಣಿಯಾಗಿದ್ದೇವೆ. ನಮ್ಮ ಬ್ರಾಹ್ಮಣ ಸಮಾಜ ಋಷಿ-ಮುನಿಗಳ ಪರಂಪರೆಯಿಂದ ಬೆಳೆದು ಬಂದಿದೆ. ದೂರದ ಕಾಶಿ ಕ್ಷೇತ್ರದ ಸುತ್ತ ಮತ್ತಲಿನ ಕನ್ಯೆಯರಿಗೆ ಸಪ್ತಪದಿಯ ಮೂಲಕ ವಿವಾಹ ಮಾಡಿಸಿದ್ದೇವೆ. ಈ ವರೆಗೆ 9 ಲಗ್ನ ಮಾಡಿಸಲಾಗಿದೆ. ಇದಕ್ಕೆ ಶ್ರೀಗಳ ತಪಃಶಕ್ತಿ ಹಾಗೂ ಆಶೀರ್ವಾದವೇ ಕಾರಣ. ನಮ್ಮ ಪ್ರಯತ್ನ ಯಶಸ್ಸು ಗಳಿಸಿದೆ ಎಂಬ ತೃಪ್ತಿ ನಮ್ಮದಾಗಿದೆ. ಇನ್ನೂ ನೂರಾರು ಕನ್ಯೆಯರನ್ನು ಈ ಭಾಗಕ್ಕೆ ನೀಡಲಿದ್ದೇವೆ. ಇದಕ್ಕೆ ಇಲ್ಲಿನ ಸಮಾಜ ಬಾಂಧವರು ಕೈಜೋಡಿಸಿದರೆ ಮಾತ್ರ ಸಾಧ್ಯ. ನಂಬಿಕೆ ಇಟ್ಟು ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಲಗ್ನವಾದವರು ಸಮಾಜದ ಋಣ ಎಂದು ತಿಳಿದು, ತಮ್ಮ ಬಂಧುಗಳ ಲಗ್ನ ಮಾಡಿಸುವಲ್ಲಿ ಆಸಕ್ತಿ ವಹಿಸಿ, ನೆರವು ನೀಡುವ ಅಗತ್ಯವಿದೆ ಎಂದರು.

ಸಪ್ತಪದಿಯ ದಕ್ಷಿಣ ಭಾರತ ಪ್ರದೇಶದ ಸಂಚಾಲಕ ವೆಂಕಟರಮಣ ಬೆಳ್ಳಿ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ಸಂಕಲ್ಪ ಶಕ್ತಿ ಮತ್ತು ಮಾರ್ಗದರ್ಶನದಲ್ಲಿ ದಕ್ಕಿಣೋತ್ತರ ಭಾರತದ ಬ್ರಾಹ್ಮಣ ಸಂಘಟನೆ ಬಲಗೊಳಿಸುವ ಉದ್ದೇಶದಿಂದ ವೈವಾಹಿಕ ಮತ್ತು ವ್ಯಾವಹಾರಿಕ ಸಂಬಂಧಗಳನ್ನು ಬೆಳೆಸುವಲ್ಲಿ ನಮ್ಮ ಸಪ್ತಪದಿ ಸಂಸ್ಥೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದರು.
ಕೆಲವು ತಿಂಗಳು ಹಿಂದೆ ಯಲ್ಲಾಪುರದ ಯುವಕನನ್ನು ವರಿಸಿದ್ದ ಉತ್ತರ ಭಾರತದ ಮಂದಾಕಿನಿ ಪಾಂಡೆ, ಸಪ್ತಪದಿಯ ಕೇಂದ್ರ ಸಮಿತಿ ಖಜಾಂಚಿ ಶಂಕರ ಭಟ್ಟ ತಾರೀಮಕ್ಕಿ, ನಿರ್ದೇಶಕ ಮಾಧವ ಕೋಟೆಮನೆ, ವರನ ತಾಯಿ ಗಿರಿಜಾ, ತಂದೆ ಪರಮೇಶ್ವರ ಗಾಂವ್ಕರ್, ವಧುವಿನ ತಂದೆ ಪವನ ಮಿಶ್ರಾ ತಾಯಿ ಮಾಲಿನಿದೇವಿ ಮತ್ತು ಅನೇಕ ಹಿರಿಯರು, ಅಭಿಮಾನಿಗಳು ಬಂಧುಗಳು ವಧೂ-ವರರನ್ನು ಆಶೀರ್ವದಿಸಿದರು.

ಚಿಣ್ಣರಿಂದ ಯಕ್ಷಕಲಾ ಪ್ರದರ್ಶನ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ನಿಲ್ಕುಂದ ಸಮೀಪದ ಕಂಚಿಕೈ ರಂಗಮಂದಿರದಲ್ಲಿ ನಡೆದ ಯಕ್ಷ ಪ್ರದರ್ಶನವಿದು. ಪ್ರಾಥಮಿಕ ಶಾಲೆಯ ಚಿಣ್ಣರು ಯಕ್ಷಗಾನದ ವರ್ಣಮಯ ವೇಷಭೂಷಣಗಳನ್ನು ಧರಿಸಿ ರಂಗ ಪ್ರದರ್ಶನ ನೀಡಿದರು. ಆಕರ್ಷಕ ವೇಷಭೂಷಣಗಳನ್ನು ಧರಿಸಿ ರಂಗಕ್ಕೆ ಬಂದು ಸೊಗಸಾದ ನೃತ್ಯಾಭಿನಯ ಪ್ರದರ್ಶಿಸಿದರು. ಮಕ್ಕಳ ಕಲಾಪ್ರತಿಭೆಯ ಅನಾವರಣಕ್ಕೆ ಇದೊಂದು ವೇದಿಕೆಯಾಯಿತು. ಸ್ಥಳೀಯ ಕರ್ಕಿಹಕ್ಕಲ ಮಹಾಗಣಪತಿ ಯಕ್ಷಗಾನ ಮಂಡಳಿ ಈ ಮಕ್ಕಳಿಗೆ ಕಲಾ ತರಬೇತಿ ನೀಡಿತ್ತು.
ಯಕ್ಷ ಕಲಾವಿದ ರಮಾನಂದ ಹೆಗಡೆ ಹೆಲ್ಲೆಕೊಪ್ಪ ಅವರು ಈ ಮಕ್ಕಳಿಗೆ ಯಕ್ಷಗಾನದ ತಾಳ, ಲಯ, ಕುಣಿತ, ಸಂಭಾಷಣೆಯ ತರಬೇತಿ ನೀಡಿ ರಂಗ ಪ್ರದರ್ಶನಕ್ಕೆ ಸಜ್ಜುಗೊಳಿಸಿದ್ದರು. ಹೆಸರಾಂತ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ ರಚಿತ ಯಜ್ಞ ಸಂರಕ್ಷಣೆ ಆಖ್ಯಾನದ ಕಥಾಭಾಗವನ್ನು ಮಕ್ಕಳು ಪ್ರಸ್ತುತಪಡಿಸಿದರು.
ರಾಮಾಯಣದ ಅವಧಿಯಲ್ಲಿ ಋಷಿಮುನಿಗಳಿಗೆ ತಾಟಕಿ ಮೊದಲಾದ ರಕ್ಕಸರಿಂದ ಕಿರುಕುಳ, ಯಜ್ಞಯಾಗಾದಿಗಳಿಗೆ ಅಡ್ಡಿ, ಅವರನ್ನು ವಿಶ್ವಾಮಿತ್ರ ಮುನಿಯ ನೇತೃತ್ವದಲ್ಲಿ ರಾಮ ಲಕ್ಷ್ಮಣರು ನಿಯಂತ್ರಿಸಿ ನಿಗ್ರಹಿಸಿದ್ದನ್ನು ಮತ್ತು ಮುಕ್ತಾಯದಲ್ಲಿ ಜನಕರಾಜನ ಪುತ್ರಿ ಸೀತೆಯನ್ನು ರಾಮ ವರಿಸಿದ ಪ್ರಸಂಗವನ್ನು ಮಕ್ಕಳು ಯಕ್ಷ ಕುಣಿತ, ಅಭಿನಯ, ಸಂಭಾಷಣೆಯ ಮೂಲಕ ಸಾದರಪಡಿಸಿದರು.
ಚಿಣ್ಣರಾದ ಮುರಳಿ (ದಶರಥ), ಪ್ರಿಯಾಂಕಾ (ಶ್ರೀರಾಮ), ಲಕ್ಷ್ಮಣ (ಸುಹಾಸ), ನಿತೀಶ (ವಿಶ್ವಾಮಿತ್ರ), ಸಾತ್ವಿಕ್ (ವಸಿಷ್ಠ), ಸುಮಿತ್ರಾ (ತಾಟಕಿ), ಪ್ರಸನ್ನ (ಮಾರೀಚ), ಸಹನಾ (ಸುಬಾಹು), ಲಿಖಿತಾ (ಸೀತೆ) ರಂಗವನ್ನೇರಿದರು. ಸಂಪದಾ (ರಾವಣ), ಪ್ರಿಯಾ (ಜನಕರಾಜ), ನಿಖಿಲ, ಪ್ರತೀಕ (ಬಾಲಗೋಪಾಲ) ಅಭಿನಯಿಸಿದರು.


ಹಿಮ್ಮೇಳದಲ್ಲಿ ಎಂ.ಪಿ.ಹೆಗಡೆ ಹುಲ್ಲಾಳದ್ದೆ ಭಾಗವತಿಕೆ, ಪರಮೇಶ್ವರ ತಾರೇಸರ ಮೃದಂಗ ವಾದನ ಮತ್ತು ಪ್ರಭಾಕರ ಹೆಗಡೆ ಕಂಚೀಕೈ ಚಂಡೆ ವಾದನದಲ್ಲಿ ಸಹಕರಿಸಿದರು. 

ಜನರ ಸಹಭಾಗಿತ್ವದಲ್ಲಿ ಎಕ್ಕಂಬಿ ಕೆರೆಗೆ ಕಾಯಕಲ್ಪ

ಜನರ ಸಹಭಾಗಿತ್ವದ ಶಿರಸಿ ಜೀವಜಲ ಕಾರ್ಯಪಡೆ ಗ್ರಾಮೀಣ ಪ್ರದೇಶದ ಕೆರೆ ಅಭಿವೃದ್ಧಿಗೆ ನಾಂದಿ ಹಾಡಿದೆ. ಬಿಸಲಕೊಪ್ಪ ಗ್ರಾಪಂ ವ್ಯಾಪ್ತಿಯ ಎಕ್ಕಂಬಿ ಕೆರೆ ಹೂಳೆತ್ತಲು ಕೆಲವೇ ಗಂಟೆಗಳಲ್ಲಿ 1.61 ಲಕ್ಷ ರೂ.ಸಂಗ್ರಹಿಸಿ ಕಾಮಗಾರಿ ಆರಂಭಿಸಿದೆ.


ಎಕ್ಕಂಬಿಯ ಏಕಾಂಬಿಕೇಶ್ವರ ದೇವಾಲಯದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 3.26 ಎಕರೆ ವಿಸ್ತೀರ್ಣದ ಕೆರೆ ಹೂಳೆತ್ತಲು ನಿರ್ಧರಿಸಲಾಗಿತ್ತು. ತಕ್ಷಣವೇ ಸ್ಥಳೀಯರು, ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ದೊರೆಯಿತು. ಮಾತ್ರವಲ್ಲ, ಜೆಸಿಬಿ, ಹಿಟಾಚಿ, ವಾಹನಗಳ ವ್ಯವಸ್ಥೆಯೂ ಆಯಿತು.

ಚಪ್ಪರಮನೆ ಶ್ರೀಧರ ಹೆಗಡೆಗೆ ಪ್ರಶಸ್ತಿ

ಕುಂಭಾಶಿಯ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಅವರು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ದಿ ಕೊಂಡದಕುಳಿ ರಾಮ ಹೆಗಡೆ ಪ್ರಶಸ್ತಿ ಪ್ರದಾನ ಸಮಾರಂಭ ಉತ್ತರ ಕನ್ನಡದ ಬಾನ್ಕುಳಿ ಮಠದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಏ.29ರ ಸಂಜೆ 7ಕ್ಕೆ ನಡೆಯಲಿದೆ. ಪ್ರಶಸ್ತಿ 25,000 ರೂ. ನಗದು ಒಳಗೊಂಡಿದೆ.

ಹಿರಿಯ ಹಾಸ್ಯ ಕಲಾವಿದ ಚಪ್ಪರಮನೆ ಶ್ರೀಧರ ಹೆಗಡೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ರಾಮ ಹೆಗಡೆ ಮತ್ತು ಲಕ್ಷ್ಮಣ ಹೆಗಡೆ ಅವಳಿ ಸಹೋದರರು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಾಗಿದ್ದು, ಹಲವು ಪೌರಾಣಿಕ ಪಾತ್ರಗಳನ್ನು ಸುಂದರವಾಗಿ ನಿರೂಪಿಸಿದವರು. ರಾಮ ಹೆಗಡೆ ಅವರ ಮೊಮ್ಮಗ, ಕಲಾವಿದ, ಪ್ರತಿಷ್ಠಾನದ ವರಿಷ್ಠ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ತಮ್ಮ ಅಜ್ಜನ ನೆನಪಿನಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.

ನೀರು ಕೊಟ್ಟವರ ಗಂಟಲು ಒಣಗ್ತಿದ್ರೂ ಕೇಳೋರಿಲ್ಲ

ಶಿರಸಿ ನಗರಕ್ಕೆ ಕಳೆದ ಐದು ದಶಕಗಳಿಂದ ನೀರು ಕೊಟ್ಟ ನಮ್ಮ ಗಂಟಲೇ ಒಣಗುತ್ತಿದೆ. ಕೃಷಿಗೆ, ಕುಡಿಯುವ ನೀರಿಗಾಗಿ ಬಾವಿಗೆ ಹಾಕಿಕೊಂಡ ಕೃಷಿ ಪಂಪ್‌ಸೆಟ್‌ಗಳನ್ನು ಕಿತ್ತುಕೊಂಡು ಬಂದಿದ್ದಾರೆ. ನಾವೇನು ಮಾಡಬೇಕು ಸ್ವಾಮಿ...
ಇದು ಕೆಂಗ್ರೆ ಹಳ್ಳ ವ್ಯಾಪ್ತಿಯ ಇಟಗುಳಿ ಹಾಗೂ ಮೇಲಿನ ಓಣಿಕೇರಿ ಪಂಚಾಯ್ತಿ ರೈತರು, ಕೃಷಿ ಕೂಲಿಕಾರ್ಮಿಕರು, ಹಿಂದುಳಿದ ಜನರು, ಮಹಿಳೆಯರ ಕೂಗು.
ನಗರಸಭೆ ಅಧಿಕಾರಿಗಳು ಹೇಳದೆ, ಕೇಳದೇ ಪಂಪ್‌ಸೆಟ್ ಎತ್ತಿಕೊಂಡು ಬಂದಿದ್ದಾರೆ. ಪಂಪ್‌ಸೆಟ್ ಮನೆ ಒಡೆದು, ್ಯೂಸ್, ಕಟೌಟ್ ಧ್ವಂಸ ಮಾಡಿ ಬಂದಿದ್ದಾರೆ. ಇದು ನ್ಯಾಯವೇ? ನಮಗೇ ಕುಡಿಯಲು ನೀರಿಲ್ಲ, ಹೀಗಿದ್ದಾಗ್ಯೂ ಹಳ್ಳಿಗರನ್ನೂ ನಿರ್ಲಕ್ಷ್ಯ ಮಾಡಿದ್ದು ಸರಿಯೇ...ಎಂಬುದು ಅವರ ಪ್ರಶ್ನೆ.
ಕಳೆದ ಹತ್ತಾರು ವರ್ಷಗಳಿಂದ ಶಿರಸಿ ನಗರದ ಜನತೆಗೆ ಕುಡಿಯುವ ನೀರಿಗಾಗಿ ಕೆಂಗ್ರೆಹೊಳೆ ಮೊರೆ ಹೋಗಿದೆ ನಗರಸಭೆ. ಇದಕ್ಕೆ ಸ್ಥಳಿಯರು ತಕರಾರು ಮಾಡಿಲ್ಲ. ಆದರೆ, ಈ ಬಾರಿ ಪರಿಸ್ಥಿತಿ ಬಿಡಗಾಯಿಸಿದೆ. ಸ್ಥಳಿಯರಿಗೆ ಕುಡಿಯಲಿಕ್ಕೆ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಗರಸಭೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಮಾಲ್ಕಿ ಜಾಗದಲ್ಲಿನ ಬಾವಿಗಳ ಹಾಗೂ ಕೆರೆಗಳ ಪಂಪ್‌ಸೆಟ್‌ಗಳನ್ನು ಕಿತ್ತುಕೊಂಡು ಬಂದಿದ್ದಾರೆ. ಕರಿಗುಂಡಿ ಬಳಿಯಲ್ಲಿ ಪಂಚಾಯತ್ ವತಿಯಿಂದ ಸರ್ಕಾರಿ ಅನುದಾನದಲ್ಲಿ ನಿರ್ಮಿಸಲಾಗಿದ್ದ ಬಾಂದಾರನ್ನು ಒಡೆದಿದ್ದಾರೆ. ಇದು ಒಂದು ಹಳ್ಳಿಗೆ ನೀಡುವ ಕುಡಿಯುವ ಯೋಜನೆ ಆಗಿದೆ. ಆದರೆ ಅಲ್ಲಿಗೂ ನೀರೂ ಇಲ್ಲವಾಗಿದೆ.


ಕಳೆದ ಐದು ದಶಕಗಳಿಂದ ಶಿರಸಿಗೆ ನೀರು ಕೊಡುತ್ತಿದ್ದೇವೆ. ಆದರೆ, ಈವರೆಗೆ ಈ ಪ್ರಶ್ನೆ ಎದ್ದಿರಲಿಲ್ಲ. ಈ ಬಾರಿ ಮಾತ್ರ ಸಮಸ್ಯೆ ಬಲವಾಗಿದೆ. ನಗರಸಭೆಯವರು, ಪಂಚಾಯ್ತಿ ಕನಿಷ್ಠ ಪರವಾನಗಿ ಪಡೆಯದೇ ಕಾಮಗಾರಿ ನಡೆಸಿದರೂ ನಾವು ಸುಮ್ಮನಿದ್ದೇವೆ. ನೀರು ಎಲ್ಲರಿಗೂ ಬೇಕು. ಆದರೆ, ದುಂಡಾವರ್ತನೆ ಸಹಿಸಲು ಸಾಧ್ಯವಿಲ್ಲ...ಇದು ಗ್ರಾಮಸ್ಥರು ಆಕ್ರೋಶ.

ಸೋಮೇಶ್ವರ ಮಹಾ ರಥೋತ್ಸವ

ಶಿರಸಿ ಸಮೀಪದ ಸೋಮ ಸಾಗರದ ಸೋಮೇಶ್ವರ ದೇವರ ಮಹಾ ರಥೋತ್ಸವವು ಸಂಭ್ರಮದಿಂದ ನಡೆಯಿತು. ಕರೂರು ಸೀಮೆಯ ಭಜಕರು ರಥಾರೂಢ ದೇವರಿಗೆ ಹಣ್ಣು ಕಾಯಿ, ಹರಕೆ ಸಲ್ಲಿಸಿ ಕೃತಾರ್ಥರಾದರು. 

ಅಡಿಕೆಗೆ ಹನಿ ನೀರಾವರಿ ಸಬ್ಸಿಡಿ ರದ್ದು ಮಾಡಬೇಡಿ

ಕೇಂದ್ರ ಸರಕಾರ ಅಡಿಕೆ ಬೆಳೆಯನ್ನು ಹನಿ ನೀರಾವರಿ ಸಬ್ಸಿಡಿ ಸೌಲಭ್ಯದಿಂದ ಹೊರಗಿಡುವ ಮೂಲಕ ಬೆಳೆಗಾರರಿಗೆ ಅನ್ಯಾಯ ಎಸಗಿದೆ. ಕೂಡಲೇ ಈ ಕುರಿತು ರಾಜ್ಯಗಳಿಗೆ ಕಳುಹಿಸಿದ ಸುತ್ತೋಲೆಯನ್ನು ಕೇಂದ್ರ ಸರಕಾರ ಹಿಂದೆ ಪಡೆಯಬೇಕು. ಕಾಫಿ, ಚಹ, ರಬ್ಬರ್ ಕೃಷಿಗೆ ಹನಿ ನೀರಾವರಿ ಸಬ್ಸಿಡಿ ಯೋಜನೆ ಒದಗಿಸಿರುವಂತೆ ಅಡಿಕೆ ಕೃಷಿಗೂ ಈ ಯೋಜನೆ ಮುಂದುವರಿಸಬೇಕು.
ದೇಶದ 13 ರಾಜ್ಯಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಈ ಪೈಕಿ ಕರ್ನಾಟಕ, ಕೇರಳ, ಅಸ್ಸಾಂ ರಾಜ್ಯಗಳು ಮುಂಚೂಣಿಯಲ್ಲಿವೆ. ಕರ್ನಾಟಕದ 24 ಜಿಲ್ಲೆಗಳಲ್ಲಿ ಅಡಿಕೆ ಕೃಷಿ ಇದ್ದು, 2,51,185 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 40,977 ಹೆಕ್ಟೇರ್, ಶಿವಮೊಗ್ಗ ಜಿಲ್ಲೆಯಲ್ಲಿ 48,187 ಹೆಕ್ಟೇರ್, ಚಿಕ್ಕಮಗಳೂರು ಜಿಲ್ಲೆಯಲ್ಲಿ 36,980 ಹೆಕ್ಟೇರ್, ದಾವಣಗೆರೆ ಜಿಲ್ಲೆಯಲ್ಲಿ 35,741 ಹೆಕ್ಟೇರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34,977 ಹೆಕ್ಟೇರ್ ಅಡಿಕೆ ಕೃಷಿ ಇದೆ. ಒಟ್ಟು ಬೆಳೆಗಾರರಲ್ಲಿ ಶೇ.85ರಷ್ಟು ಮಂದಿ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರಾಗಿದ್ದು, ಹನಿ ನೀರಾವರಿ ಯೋಜನೆ ಅವರಿಗೆ ಸೂಕ್ತವಾಗಿದೆ. ಈಗಾಗಲೇ ಅವರಲ್ಲಿ ಹಲವು ಮಂದಿ ಹನಿ ನೀರಾವರಿ ಯೋಜನೆ ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ, ಇದೀಗ ಹನಿ ನೀರಾವರಿ ಯೋಜನೆಯಿಂದ ಅಡಿಕೆ ಕೃಷಿಯನ್ನು ಹೊರಗಿಡುವ ಕೇಂದ್ರ ಸರ್ಕಾರದ ನಿರ್ಧಾರ ಬೆಳೆಗಾರರಿಗೆ ಆಘಾತ ಉಂಟು ಮಾಡಿದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಮೇಲೆ ಇದು ಪರಿಣಾಮ ಬೀರಲಿದೆ.
ಅಡಿಕೆಗೆ ಕೊಳೆ ಅಥವಾ ಹಳದಿ ರೋಗ ಬಂದಾಗ ಮತ್ತು ಬೆಲೆ ಕುಸಿದಾಗ ರಾಜ್ಯ ಸರಕಾರ ಬೆಂಬಲ ಬೆಲೆ ನೀಡಿ ನೆರವಾಗುತ್ತಿದೆ. ಆದರೆ, ಕೇಂದ್ರ ಸರಕಾರ ಅಡಿಕೆ ಕೃಷಿಕರಿಗೆ ನಿರ್ದಿಷ್ಟ ಯೋಜನೆ ಜಾರಿಗೊಳಿಸುತ್ತಿಲ್ಲ. ಅಡಿಕೆ ಆಮದು ತಡೆಯಲು ಕ್ರಮ ಜರುಗಿಸುತ್ತಿಲ್ಲ. ಜೊತೆಗೆ ರೈತರ ಮೇಲೆ ಈಗ ಮತ್ತೊಂದು ಬರೆ. ಕೇಂದ್ರದ ಈ ನಿರ್ಧಾರದ ಹಿಂದೆ ತಂಬಾಕು ಲಾಬಿ ಇರಬಹುದೇ ಎಂಬ ಅನುಮಾನವೂ ಕಾಡುತ್ತಿದೆ.

ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಕಾಫಿ, ಚಹ, ರಬ್ಬರ್ ಕೃಷಿಗೆ ಹನಿ ನೀರಾವರಿ ಸಬ್ಸಿಡಿ ಯೋಜನೆ ಒದಗಿಸಿರುವಂತೆ ಅಡಿಕೆ ಕೃಷಿಗೂ ಈ ಯೋಜನೆ ಮುಂದುವರಿಸಬೇಕು. ರಬ್ಬರ್ ಮತ್ತು ಕಾಫಿ ಮಂಡಳಿ ರೀತಿಯಲ್ಲಿ ಅಡಿಕೆಗೂ ಮಂಡಳಿ ರಚಿಸಬೇಕು. ಮಂಡಳಿ ಸ್ಥಾಪನೆಯಾದರೆ ಆವರ್ತನ ನಿಧಿ ರಚಿಸಿ ಬೆಂಬಲ ಬೆಲೆ, ಉಪ ಉತ್ಪನ್ನ ತಯಾರಿ, ಆಮದು ನಿರ್ಬಂಧ ಇತ್ಯಾದಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.