ಚಿಣ್ಣರಿಂದ ಯಕ್ಷಕಲಾ ಪ್ರದರ್ಶನ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ನಿಲ್ಕುಂದ ಸಮೀಪದ ಕಂಚಿಕೈ ರಂಗಮಂದಿರದಲ್ಲಿ ನಡೆದ ಯಕ್ಷ ಪ್ರದರ್ಶನವಿದು. ಪ್ರಾಥಮಿಕ ಶಾಲೆಯ ಚಿಣ್ಣರು ಯಕ್ಷಗಾನದ ವರ್ಣಮಯ ವೇಷಭೂಷಣಗಳನ್ನು ಧರಿಸಿ ರಂಗ ಪ್ರದರ್ಶನ ನೀಡಿದರು. ಆಕರ್ಷಕ ವೇಷಭೂಷಣಗಳನ್ನು ಧರಿಸಿ ರಂಗಕ್ಕೆ ಬಂದು ಸೊಗಸಾದ ನೃತ್ಯಾಭಿನಯ ಪ್ರದರ್ಶಿಸಿದರು. ಮಕ್ಕಳ ಕಲಾಪ್ರತಿಭೆಯ ಅನಾವರಣಕ್ಕೆ ಇದೊಂದು ವೇದಿಕೆಯಾಯಿತು. ಸ್ಥಳೀಯ ಕರ್ಕಿಹಕ್ಕಲ ಮಹಾಗಣಪತಿ ಯಕ್ಷಗಾನ ಮಂಡಳಿ ಈ ಮಕ್ಕಳಿಗೆ ಕಲಾ ತರಬೇತಿ ನೀಡಿತ್ತು.
ಯಕ್ಷ ಕಲಾವಿದ ರಮಾನಂದ ಹೆಗಡೆ ಹೆಲ್ಲೆಕೊಪ್ಪ ಅವರು ಈ ಮಕ್ಕಳಿಗೆ ಯಕ್ಷಗಾನದ ತಾಳ, ಲಯ, ಕುಣಿತ, ಸಂಭಾಷಣೆಯ ತರಬೇತಿ ನೀಡಿ ರಂಗ ಪ್ರದರ್ಶನಕ್ಕೆ ಸಜ್ಜುಗೊಳಿಸಿದ್ದರು. ಹೆಸರಾಂತ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ ರಚಿತ ಯಜ್ಞ ಸಂರಕ್ಷಣೆ ಆಖ್ಯಾನದ ಕಥಾಭಾಗವನ್ನು ಮಕ್ಕಳು ಪ್ರಸ್ತುತಪಡಿಸಿದರು.
ರಾಮಾಯಣದ ಅವಧಿಯಲ್ಲಿ ಋಷಿಮುನಿಗಳಿಗೆ ತಾಟಕಿ ಮೊದಲಾದ ರಕ್ಕಸರಿಂದ ಕಿರುಕುಳ, ಯಜ್ಞಯಾಗಾದಿಗಳಿಗೆ ಅಡ್ಡಿ, ಅವರನ್ನು ವಿಶ್ವಾಮಿತ್ರ ಮುನಿಯ ನೇತೃತ್ವದಲ್ಲಿ ರಾಮ ಲಕ್ಷ್ಮಣರು ನಿಯಂತ್ರಿಸಿ ನಿಗ್ರಹಿಸಿದ್ದನ್ನು ಮತ್ತು ಮುಕ್ತಾಯದಲ್ಲಿ ಜನಕರಾಜನ ಪುತ್ರಿ ಸೀತೆಯನ್ನು ರಾಮ ವರಿಸಿದ ಪ್ರಸಂಗವನ್ನು ಮಕ್ಕಳು ಯಕ್ಷ ಕುಣಿತ, ಅಭಿನಯ, ಸಂಭಾಷಣೆಯ ಮೂಲಕ ಸಾದರಪಡಿಸಿದರು.
ಚಿಣ್ಣರಾದ ಮುರಳಿ (ದಶರಥ), ಪ್ರಿಯಾಂಕಾ (ಶ್ರೀರಾಮ), ಲಕ್ಷ್ಮಣ (ಸುಹಾಸ), ನಿತೀಶ (ವಿಶ್ವಾಮಿತ್ರ), ಸಾತ್ವಿಕ್ (ವಸಿಷ್ಠ), ಸುಮಿತ್ರಾ (ತಾಟಕಿ), ಪ್ರಸನ್ನ (ಮಾರೀಚ), ಸಹನಾ (ಸುಬಾಹು), ಲಿಖಿತಾ (ಸೀತೆ) ರಂಗವನ್ನೇರಿದರು. ಸಂಪದಾ (ರಾವಣ), ಪ್ರಿಯಾ (ಜನಕರಾಜ), ನಿಖಿಲ, ಪ್ರತೀಕ (ಬಾಲಗೋಪಾಲ) ಅಭಿನಯಿಸಿದರು.


ಹಿಮ್ಮೇಳದಲ್ಲಿ ಎಂ.ಪಿ.ಹೆಗಡೆ ಹುಲ್ಲಾಳದ್ದೆ ಭಾಗವತಿಕೆ, ಪರಮೇಶ್ವರ ತಾರೇಸರ ಮೃದಂಗ ವಾದನ ಮತ್ತು ಪ್ರಭಾಕರ ಹೆಗಡೆ ಕಂಚೀಕೈ ಚಂಡೆ ವಾದನದಲ್ಲಿ ಸಹಕರಿಸಿದರು.