ಮಲೆನಾಡ ಕುವರನಿಗೆ ಉತ್ತರ ಪ್ರದೇಶ ಕನ್ಯೆ

ಯಲ್ಲಾಪುರ ತಾಲೂಕಿನ ಕವಡೀಕೆರೆ ದೇವಸ್ಥಾನದಲ್ಲಿ ಉತ್ತರ ಪ್ರದೇಶದ ಕನ್ಯೆ ಪ್ರಜ್ಞಾ ಮಿಶ್ರಾ ಹಾಗೂ ಶಿಂಗನಮನೆಯ ಶ್ರೀನಿವಾಸ ಗಾಂವ್ಕರ್ ವಿವಾಹ ನೆರವೇರಿತು.
ಉತ್ತರ ಭಾರತದ ಮಿರ್ಜಾಪುರದ ಸಪ್ತಪದಿ ಸಂಚಾಲಕ ತ್ರಿಲೋಕನಾಥ್ ತ್ರಿವೇದಿ ಮಾತನಾಡಿ, ಉತ್ತರ ಪ್ರದೇಶದ ನಾವು, ದಕ್ಷಿಣ ಭಾರತದ ಪ್ರಕೃತಿ ಸೌಂದರ್ಯ ಹಾಗೂ ಜನರ ಪ್ರೀತಿ-ವಿಶ್ವಾಸಗಳನ್ನು ಗಳಿಸುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ-ವಿಶ್ವಾಸಕ್ಕೆ ಸದಾ ಋಣಿಯಾಗಿದ್ದೇವೆ. ನಮ್ಮ ಬ್ರಾಹ್ಮಣ ಸಮಾಜ ಋಷಿ-ಮುನಿಗಳ ಪರಂಪರೆಯಿಂದ ಬೆಳೆದು ಬಂದಿದೆ. ದೂರದ ಕಾಶಿ ಕ್ಷೇತ್ರದ ಸುತ್ತ ಮತ್ತಲಿನ ಕನ್ಯೆಯರಿಗೆ ಸಪ್ತಪದಿಯ ಮೂಲಕ ವಿವಾಹ ಮಾಡಿಸಿದ್ದೇವೆ. ಈ ವರೆಗೆ 9 ಲಗ್ನ ಮಾಡಿಸಲಾಗಿದೆ. ಇದಕ್ಕೆ ಶ್ರೀಗಳ ತಪಃಶಕ್ತಿ ಹಾಗೂ ಆಶೀರ್ವಾದವೇ ಕಾರಣ. ನಮ್ಮ ಪ್ರಯತ್ನ ಯಶಸ್ಸು ಗಳಿಸಿದೆ ಎಂಬ ತೃಪ್ತಿ ನಮ್ಮದಾಗಿದೆ. ಇನ್ನೂ ನೂರಾರು ಕನ್ಯೆಯರನ್ನು ಈ ಭಾಗಕ್ಕೆ ನೀಡಲಿದ್ದೇವೆ. ಇದಕ್ಕೆ ಇಲ್ಲಿನ ಸಮಾಜ ಬಾಂಧವರು ಕೈಜೋಡಿಸಿದರೆ ಮಾತ್ರ ಸಾಧ್ಯ. ನಂಬಿಕೆ ಇಟ್ಟು ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ. ಲಗ್ನವಾದವರು ಸಮಾಜದ ಋಣ ಎಂದು ತಿಳಿದು, ತಮ್ಮ ಬಂಧುಗಳ ಲಗ್ನ ಮಾಡಿಸುವಲ್ಲಿ ಆಸಕ್ತಿ ವಹಿಸಿ, ನೆರವು ನೀಡುವ ಅಗತ್ಯವಿದೆ ಎಂದರು.

ಸಪ್ತಪದಿಯ ದಕ್ಷಿಣ ಭಾರತ ಪ್ರದೇಶದ ಸಂಚಾಲಕ ವೆಂಕಟರಮಣ ಬೆಳ್ಳಿ ಮಾತನಾಡಿ, ಸ್ವರ್ಣವಲ್ಲೀ ಶ್ರೀಗಳ ಸಂಕಲ್ಪ ಶಕ್ತಿ ಮತ್ತು ಮಾರ್ಗದರ್ಶನದಲ್ಲಿ ದಕ್ಕಿಣೋತ್ತರ ಭಾರತದ ಬ್ರಾಹ್ಮಣ ಸಂಘಟನೆ ಬಲಗೊಳಿಸುವ ಉದ್ದೇಶದಿಂದ ವೈವಾಹಿಕ ಮತ್ತು ವ್ಯಾವಹಾರಿಕ ಸಂಬಂಧಗಳನ್ನು ಬೆಳೆಸುವಲ್ಲಿ ನಮ್ಮ ಸಪ್ತಪದಿ ಸಂಸ್ಥೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದರು.
ಕೆಲವು ತಿಂಗಳು ಹಿಂದೆ ಯಲ್ಲಾಪುರದ ಯುವಕನನ್ನು ವರಿಸಿದ್ದ ಉತ್ತರ ಭಾರತದ ಮಂದಾಕಿನಿ ಪಾಂಡೆ, ಸಪ್ತಪದಿಯ ಕೇಂದ್ರ ಸಮಿತಿ ಖಜಾಂಚಿ ಶಂಕರ ಭಟ್ಟ ತಾರೀಮಕ್ಕಿ, ನಿರ್ದೇಶಕ ಮಾಧವ ಕೋಟೆಮನೆ, ವರನ ತಾಯಿ ಗಿರಿಜಾ, ತಂದೆ ಪರಮೇಶ್ವರ ಗಾಂವ್ಕರ್, ವಧುವಿನ ತಂದೆ ಪವನ ಮಿಶ್ರಾ ತಾಯಿ ಮಾಲಿನಿದೇವಿ ಮತ್ತು ಅನೇಕ ಹಿರಿಯರು, ಅಭಿಮಾನಿಗಳು ಬಂಧುಗಳು ವಧೂ-ವರರನ್ನು ಆಶೀರ್ವದಿಸಿದರು.