ಒಂಟಿಯಾಗಿ, ಒಂಟಿ ಬಾವಿ ತೋಡಿದ ಮಹಿಳೆ

ಉತ್ತರ ಕನ್ನಡದ ಶಿರಸಿ ಹೆದ್ದಾರಿಗೆ ಅಂಟಿಕೊಂಡಿರುವ ಗಣೇಶ ನಗರದ ಬಡ ಮಹಿಳೆ, ಗೌರಿ ಚಂದ್ರಶೇಖರ ನಾಯ್ಕ (51), ಏಕಾಂಗಿಯಾಗಿ ಬಾವಿ ತೋಡಿದ್ದಾಳೆ. ಮನೆಯ ಹಿಂಭಾಗದಲ್ಲಿ 150 ಅಡಿಕೆ ಹಾಗೂ 15 ತೆಂಗಿನ ಸಸಿಗಳನ್ನು ಬೆಳೆಸಿಕೊಂಡಿದ್ದಾಳೆ. ಇವು ನೀರಿನ ಕೊರತೆಯಿಂದ ಬಾಡಲು ಆರಂಭಿಸಿದವು. ಪೇಟೆಗೆ ಹೋಗಿ ಹಾರೆ, ಗುದ್ದಲಿ, ಚಾಣ, ಹಗ್ಗ ತಂದಳು. ಇರುವ ಬಕೆಟ್ ಬಳಸಿ ಬಾವಿ ತೋಡಲು ಆರಂಭಿಸಿದಳು. 40 ಅಡಿ ಆಳದ ತನಕವೂ ಒಬ್ಬಂಟಿಯಾಗಿ ತೆಗೆದ ಗೌರಿ, ಕೊನೆಯ 20 ಅಡಿ ಆಳಕ್ಕೆ ಮಾತ್ರ ನೀರು ಜಗ್ಗಲು, ಮಣ್ಣು ಎಳೆಯಲು ಮೂವರು ಹೆಣ್ಣಾಳುಗಳ ನೆರವು ಪಡೆದಿದ್ದಾಳೆ.
ಮುಂಜಾನೆ 8 ರಿಂದ ಸಂಜೆ ಕತ್ತಲಾಗುವ ತನಕ ಬಾವಿಯದ್ದೇ ಧ್ಯಾನ. ಮೊದಲು ಸರಸರನೇ ಸಾಗಿತು ಕೆಲಸ. ವಾರಗಳು ಉರುಳಿದ ಬಳಿಕ ಮಣ್ಣು ಅಗೆದು ಬಕೆಟ್‌ನಲ್ಲಿ ತುಂಬಿಟ್ಟು ಬಾವಿಯಿಂದ ಮೇಲೆ ಬಂದು ಮಣ್ಣು ಎಳೆದು ಹಾಕಿ ಕೆಳಗೆ ಇಳಿಯುತ್ತಿದ್ದಳು. ಹೀಗೆ 40 ಅಡಿ ಆಳ ಆಗುವ ತನಕವೂ ಮಾಡಿದ್ದಾಳೆ. ಬಾವಿ ತೋಡುವಾಗ ಬಿಣಚು ಕಲ್ಲುಗಳೂ ಬಂದಿದ್ದವು. ಪ್ರತಿ ದಿನ 150ಕ್ಕೂ ಹೆಚ್ಚು ಸಲ ಬಾವಿಗಿಳಿದು ಮೇಲಕ್ಕೆ ಏರಿದ್ದಳು. ಕೈ, ಕಾಲು ನೋವು ಬಂದರೂ ಛಲ ಬಿಡಲಿಲ್ಲ.