ನೀರು ಕೊಟ್ಟವರ ಗಂಟಲು ಒಣಗ್ತಿದ್ರೂ ಕೇಳೋರಿಲ್ಲ

ಶಿರಸಿ ನಗರಕ್ಕೆ ಕಳೆದ ಐದು ದಶಕಗಳಿಂದ ನೀರು ಕೊಟ್ಟ ನಮ್ಮ ಗಂಟಲೇ ಒಣಗುತ್ತಿದೆ. ಕೃಷಿಗೆ, ಕುಡಿಯುವ ನೀರಿಗಾಗಿ ಬಾವಿಗೆ ಹಾಕಿಕೊಂಡ ಕೃಷಿ ಪಂಪ್‌ಸೆಟ್‌ಗಳನ್ನು ಕಿತ್ತುಕೊಂಡು ಬಂದಿದ್ದಾರೆ. ನಾವೇನು ಮಾಡಬೇಕು ಸ್ವಾಮಿ...
ಇದು ಕೆಂಗ್ರೆ ಹಳ್ಳ ವ್ಯಾಪ್ತಿಯ ಇಟಗುಳಿ ಹಾಗೂ ಮೇಲಿನ ಓಣಿಕೇರಿ ಪಂಚಾಯ್ತಿ ರೈತರು, ಕೃಷಿ ಕೂಲಿಕಾರ್ಮಿಕರು, ಹಿಂದುಳಿದ ಜನರು, ಮಹಿಳೆಯರ ಕೂಗು.
ನಗರಸಭೆ ಅಧಿಕಾರಿಗಳು ಹೇಳದೆ, ಕೇಳದೇ ಪಂಪ್‌ಸೆಟ್ ಎತ್ತಿಕೊಂಡು ಬಂದಿದ್ದಾರೆ. ಪಂಪ್‌ಸೆಟ್ ಮನೆ ಒಡೆದು, ್ಯೂಸ್, ಕಟೌಟ್ ಧ್ವಂಸ ಮಾಡಿ ಬಂದಿದ್ದಾರೆ. ಇದು ನ್ಯಾಯವೇ? ನಮಗೇ ಕುಡಿಯಲು ನೀರಿಲ್ಲ, ಹೀಗಿದ್ದಾಗ್ಯೂ ಹಳ್ಳಿಗರನ್ನೂ ನಿರ್ಲಕ್ಷ್ಯ ಮಾಡಿದ್ದು ಸರಿಯೇ...ಎಂಬುದು ಅವರ ಪ್ರಶ್ನೆ.
ಕಳೆದ ಹತ್ತಾರು ವರ್ಷಗಳಿಂದ ಶಿರಸಿ ನಗರದ ಜನತೆಗೆ ಕುಡಿಯುವ ನೀರಿಗಾಗಿ ಕೆಂಗ್ರೆಹೊಳೆ ಮೊರೆ ಹೋಗಿದೆ ನಗರಸಭೆ. ಇದಕ್ಕೆ ಸ್ಥಳಿಯರು ತಕರಾರು ಮಾಡಿಲ್ಲ. ಆದರೆ, ಈ ಬಾರಿ ಪರಿಸ್ಥಿತಿ ಬಿಡಗಾಯಿಸಿದೆ. ಸ್ಥಳಿಯರಿಗೆ ಕುಡಿಯಲಿಕ್ಕೆ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಗರಸಭೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಮಾಲ್ಕಿ ಜಾಗದಲ್ಲಿನ ಬಾವಿಗಳ ಹಾಗೂ ಕೆರೆಗಳ ಪಂಪ್‌ಸೆಟ್‌ಗಳನ್ನು ಕಿತ್ತುಕೊಂಡು ಬಂದಿದ್ದಾರೆ. ಕರಿಗುಂಡಿ ಬಳಿಯಲ್ಲಿ ಪಂಚಾಯತ್ ವತಿಯಿಂದ ಸರ್ಕಾರಿ ಅನುದಾನದಲ್ಲಿ ನಿರ್ಮಿಸಲಾಗಿದ್ದ ಬಾಂದಾರನ್ನು ಒಡೆದಿದ್ದಾರೆ. ಇದು ಒಂದು ಹಳ್ಳಿಗೆ ನೀಡುವ ಕುಡಿಯುವ ಯೋಜನೆ ಆಗಿದೆ. ಆದರೆ ಅಲ್ಲಿಗೂ ನೀರೂ ಇಲ್ಲವಾಗಿದೆ.


ಕಳೆದ ಐದು ದಶಕಗಳಿಂದ ಶಿರಸಿಗೆ ನೀರು ಕೊಡುತ್ತಿದ್ದೇವೆ. ಆದರೆ, ಈವರೆಗೆ ಈ ಪ್ರಶ್ನೆ ಎದ್ದಿರಲಿಲ್ಲ. ಈ ಬಾರಿ ಮಾತ್ರ ಸಮಸ್ಯೆ ಬಲವಾಗಿದೆ. ನಗರಸಭೆಯವರು, ಪಂಚಾಯ್ತಿ ಕನಿಷ್ಠ ಪರವಾನಗಿ ಪಡೆಯದೇ ಕಾಮಗಾರಿ ನಡೆಸಿದರೂ ನಾವು ಸುಮ್ಮನಿದ್ದೇವೆ. ನೀರು ಎಲ್ಲರಿಗೂ ಬೇಕು. ಆದರೆ, ದುಂಡಾವರ್ತನೆ ಸಹಿಸಲು ಸಾಧ್ಯವಿಲ್ಲ...ಇದು ಗ್ರಾಮಸ್ಥರು ಆಕ್ರೋಶ.