ಚಪ್ಪರಮನೆ ಶ್ರೀಧರ ಹೆಗಡೆಗೆ ಪ್ರಶಸ್ತಿ

ಕುಂಭಾಶಿಯ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಅವರು ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ದಿ ಕೊಂಡದಕುಳಿ ರಾಮ ಹೆಗಡೆ ಪ್ರಶಸ್ತಿ ಪ್ರದಾನ ಸಮಾರಂಭ ಉತ್ತರ ಕನ್ನಡದ ಬಾನ್ಕುಳಿ ಮಠದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಏ.29ರ ಸಂಜೆ 7ಕ್ಕೆ ನಡೆಯಲಿದೆ. ಪ್ರಶಸ್ತಿ 25,000 ರೂ. ನಗದು ಒಳಗೊಂಡಿದೆ.

ಹಿರಿಯ ಹಾಸ್ಯ ಕಲಾವಿದ ಚಪ್ಪರಮನೆ ಶ್ರೀಧರ ಹೆಗಡೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ರಾಮ ಹೆಗಡೆ ಮತ್ತು ಲಕ್ಷ್ಮಣ ಹೆಗಡೆ ಅವಳಿ ಸಹೋದರರು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಾಗಿದ್ದು, ಹಲವು ಪೌರಾಣಿಕ ಪಾತ್ರಗಳನ್ನು ಸುಂದರವಾಗಿ ನಿರೂಪಿಸಿದವರು. ರಾಮ ಹೆಗಡೆ ಅವರ ಮೊಮ್ಮಗ, ಕಲಾವಿದ, ಪ್ರತಿಷ್ಠಾನದ ವರಿಷ್ಠ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ತಮ್ಮ ಅಜ್ಜನ ನೆನಪಿನಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.