ಕಾವೇರಿ ಪುಷ್ಕರಕ್ಕೆ ಹೋಗಿ ಬನ್ನಿ

ಗುರು ಗ್ರಹ ತುಲಾ ರಾಶಿ ಪ್ರವೇಶಿಸುವ ಪುಣ್ಯ ಕಾಲದಲ್ಲಿ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಕಾವೇರಿ ಮಹಾ ಪುಷ್ಕರ ನಡೆಯುತ್ತಿದೆ. ಸೆ.12, ಮಂಗಳವಾರ ಬೆಳಗ್ಗೆ 7.20ರ ವೇಳೆಗೆ ಗುರು ತುಲಾ ರಾಶಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಪುಷ್ಕರಕ್ಕೆ ಚಾಲನೆ ನೀಡಲಾ ಗಿದೆ.  
ಕೊಡಗಿನ ಭಾಗಮಂಡಲದಿಂದ ಶ್ರೀರಂಗಪಟ್ಟಣಕ್ಕೆ ಕಮಂಡಲದಿಂದ ತರಲಾಗಿದ್ದ ‘ಕಾವೇರಿ’ ಪೂರ್ಣಕುಂಭವನ್ನು ರಂಗನಾಥ ಸ್ವಾಮಿ ದೇವಾಲಯದ ಸ್ನಾನಘಟ್ಟದ ವೇದಿಕೆಗೆ ತಂದು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ, ಗಣಪತಿ ಪೂಜೆ, ಪುಣ್ಯಾಹ, ಗಣಹೋಮ, ಕುಂಭೇಶ್ವರ ಆಹ್ವಾನ, ಕುಂಭಪೂಜೆ, ಪುಷ್ಕರ ದೇವತೆಗಳ ಆಹ್ವಾನ, ಯತಿಗಳಿಂದ ಕಾವೇರಿ ಪೂಜೆ, ಬಾಗಿನ ಅರ್ಪಣೆ, ಯತಿಗಳ ಸ್ನಾನ, ದಂಡಸ್ನಾನ, ಕುಂಭದ್ರೋಣ, ಕಮಂಡಲ ಸ್ನಾನ ನೆರವೇರಿತು. ಬಳಿಕ ಮಹಾಮಂಗಳಾರತಿಯೊಂದಿಗೆ ಕಾವೇರಿ ಮಾತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಇದೇ ವೇಳೆ, ವಿವಿಧ ಮಠಾಧೀಶರು, ಸಾಧು-ಸಂತರು, ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಬಳಿಕ, ವಿಶೇಷ ಆರತಿ ಮಾಡಿ ಬಾಗಿನ ಸಮರ್ಪಿಸಿದರು. ಕಾವೇರಿ ನದಿಯಲ್ಲಿ ಮಿಂದೆದ್ದ ಭಕ್ತರು ಪೂರ್ಣಕುಂಭಕ್ಕೆ ಅಕ್ಷತೆ ಹಾಕಿ, ಪೂಜೆ ಸಲ್ಲಿಸಿ ತೆರಳಿದರು. ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾವೇರಿ ನದಿಗೆ ಆರತಿ ಪೂಜಾ ಕಾರ್ಯಕ್ರಮ ನಡೆಯಿತು. ತಟ್ಟೆಯಲ್ಲಿ ದೀಪಗಳನ್ನಿಟ್ಟು ಕಾವೇರಿ ನದಿಯಲ್ಲಿ ತೇಲಿ ಬಿಟ್ಟ ಈ ಪೂಜೆಯಲ್ಲಿ ಪಾಲ್ಗೊಳ್ಳಲು 20 ರೂ.ಕೊಟ್ಟು ಭಕ್ತರು ಬುಕಿಂಗ್ ಮಾಡಿಕೊಂಡಿದ್ದರು. ಆರತಿ ಪೂಜೆಯಲ್ಲಿ ಭಕ್ತರು ದೀಪಗಳನ್ನು ತಟ್ಟೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡುವುದರೊಂದಿಗೆ ಧನ್ಯತಾಭಾವ ಮೆರೆದರು.
ಪುಷ್ಕರ ಸ್ನಾನಕ್ಕೆ ಶ್ರೀರಂಗಪಟ್ಟಣದ ಗೋಸಾಯಿಘಾಟ್, ನಿಮಿಷಾಂಬ ದೇವಸ್ಥಾನ, ರಂಗನಾಥ ಸ್ವಾಮಿ ದೇವಾಲಯ ಮುಂಭಾಗದ ಸ್ನಾನಘಟ್ಟ ಮತ್ತು ಪಶ್ಚಿಮವಾಹಿನಿಯ ಸ್ನಾನಘಟ್ಟಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸಂಗಮ ಮತ್ತು ಚಿಕ್ಕ ಗೋಸಾಯಿಘಾಟ್ ಬಳಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.
ಸೆ.23ರವರೆಗೆ, 12 ದಿನಗಳ ಕಾಲ ಪುಷ್ಕರ ನಡೆಯಲಿದೆ. ನಿತ್ಯ ಆರಾಧನೆ, ಹೋಮ, ಹವನಗಳು, ಮಠಾಧಿಪತಿಗಳು, ಸಾಧು, ಸಂತರ ವಿಶೇಷ ಮೆರವಣಿಗೆ ನಡೆಯಲಿದೆ. ಕಾವೇರಿ ನದಿಗೆ ವಿಶೇಷ ಆರತಿ ಹಾಗೂ ಬಾಗಿನ ಸಮರ್ಪಣೆ ಮಾಡಲಾಗುತ್ತದೆ. ವಿವಿಧ ಕಲಾವಿದರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರತಿಯ ಮಹತ್ವ ಗೊತ್ತೆ?
ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಾವೇರಿ ಮಾತೆ ನದಿಯಾಗಿ ಹರಿಯುತ್ತಾ ಭಕ್ತರ ಪಾಪಗಳನ್ನು ತೊಳೆದಿರುತ್ತಾಳೆ. ಅವಳಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಸೂರ್ಯಾಸ್ತದಲ್ಲಿ ಆಕೆ ಶಯನಾವಸ್ಥೆಗೆ ತೆರಳುವಾಗ ಆರತಿ ಪೂಜೆ ಮಾಡಿ, ಲಾಲಿ ಹಾಡಿ ಮಲಗಿಸುವುದು ಇದರ ವಿಶೇಷ. ಸಪ್ತ ಋಷಿಗಳ ಮಾದರಿಯಲ್ಲಿ ಏಳು ಮಂದಿ ಧಾರ್ಮಿಕ ಮುಖಂಡರು ನಿಂತು ಕಾವೇರಿ ಮಾತೆಗೆ ಆರತಿ ಬೆಳಗಿದರೆ, ಮಹಿಳೆಯರು ದೀಪಗಳನ್ನು ಹಚ್ಚಿ ತಟ್ಟೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡುವುದರೊಂದಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.


ಪುಣ್ಯಕ್ಷೇತ್ರವಿದು:
ಶ್ರೀರಂಗಪಟ್ಟಣ ದಕ್ಷಿಣದ ಕಾಶಿ ಎಂದೇ ಪ್ರಖ್ಯಾತವಾಗಿದೆ. ಇದು ರಂಗನಾಥ ಸ್ವಾಮಿ ನೆಲೆಸಿರುವ ಪುರಾಣ ಪ್ರಸಿದ್ಧ ಕ್ಷೇತ್ರ. ಕಾವೇರಿ ಉಗಮಸ್ಥಾನ ತಲಕಾವೇರಿಯಾಗಿದ್ದರೂ ದ್ವೀಪದಂತಿರುವ ಶ್ರೀರಂಗಪಟ್ಟಣದ ಸುತ್ತಲೂ ಕಾವೇರಿ ನದಿ ವಿಶಾಲವಾಗಿ ಹರಿಯುತ್ತದೆ. ಪುಣ್ಯಕ್ಷೇತ್ರವಾಗಿರುವ ಈ ಪ್ರದೇಶದಲ್ಲಿ ಪುಷ್ಕರ ನಡೆಸುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಉಗಮ ಸ್ಥಾನದಿಂದ ಕಾವೇರಿ ನದಿ ಹರಿಯುವ 800 ಕಿಲೋ ಮೀಟರ್ ಉದ್ದಕ್ಕೂ ಪುಷ್ಕರ ನಡೆಯುತ್ತದೆ. ಪುಣ್ಯಕ್ಷೇತ್ರಗಳಲ್ಲಿ ಸ್ನಾನ ಮಾಡುವುದರಿಂದ ಪಾಪಕರ್ಮಗಳು ದೂರವಾಗುತ್ತವೆ. ಅದಕ್ಕಾಗಿ ಕಾವೇರಿ ನದಿಯ ಪ್ರಥಮ ಪುಷ್ಕರ ಮಹೋತ್ಸವಕ್ಕೆ ಶ್ರೀರಂಗಪಟ್ಟಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಪುಷ್ಕರ ಎನ್ನುವುದು ಬ್ರಹ್ಮ ಕುಂಡಲದಿಂದ ಬಂದಿರುವಂತಹದ್ದು. ಅದು ಜಲದ ರೂಪದಲ್ಲಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ ಪಾಪನಾಶವಾಗುತ್ತದೆ ಎಂಬುದು ಭಕ್ತರ ನಂಬಿಕೆ. 
ಪ್ರತಿ ರಾಶಿಗೂ ಒಂದೊಂದು ನದಿ:
ಗುರು ಗ್ರಹವು ಮೇಷ ರಾಶಿಗೆ ಪ್ರವೇಶಿಸಿದಾಗ ಗಂಗಾ ನದಿ, ವೃಷಭ ರಾಶಿಗೆ ಗುರು ಪ್ರವೇಶಿಸಿದಾಗ ನರ್ಮದಾ ನದಿ, ಮಿಥುನಾ ರಾಶಿಗೆ ಪ್ರವೇಶಿಸಿದಾಗ ಸರಸ್ವತಿ ನದಿ, ಕರ್ಕಾಟಕ ರಾಶಿಗೆ ಪ್ರವೇಶಿಸಿದಾಗ ಯಮುನಾ ನದಿ, ಸಿಂಹ ರಾಶಿಗೆ ಪ್ರವೇಶಿಸಿದಾಗ ಗೋದಾವರಿ ನದಿ, ಕನ್ಯಾ ರಾಶಿಗೆ ಪ್ರವೇಶಿಸಿದಾಗ ಕೃಷ್ಣಾ ನದಿ, ತುಲಾ ರಾಶಿಗೆ ಪ್ರವೇಶಿಸಿದಾಗ ಕಾವೇರಿ ನದಿ ಪುಷ್ಕರವಾಗುತ್ತದೆ. ಉಳಿದಂತೆ ಗುರು ಗ್ರಹ ವೃಶ್ಚಿಕ ರಾಶಿಗೆ ಪ್ರವೇಶಿಸಿದರೆ ಭೀಮಾ ನದಿ, ಧನಸ್ಸು ರಾಶಿಗೆ ಪ್ರವೇಶಿಸಿದಾಗ ತಪತಿ, ಮಕರ ರಾಶಿಗೆ ಪ್ರವೇಶಿಸಿದಾಗ ತುಂಗಭದ್ರ, ಕುಂಭ ರಾಶಿಗೆ ಪ್ರವೇಶಿಸಿದಾಗ ಸಿಂಧು ಮತ್ತು ಮೀನ ರಾಶಿಗೆ ಪ್ರವೇಶಿಸಿದಾಗ ಮಹಾನದಿ ಪುಷ್ಕರ.